ಬಂಟ್ವಾಳ: ಬ್ಲಡ್ ಕ್ಯಾನ್ಸರ್ ವಿರುದ್ಧ ಸ್ಟೆಮ್ ಸೆಲ್ ನೋಂದಣಿ ಅಭಿಯಾನ ಆರಂಭಿಸಿರುವ ಮಂಗಳೂರಿನ ಕೆನರಾ ಸಿಬಿಎಸ್ಸಿ ಶಾಲೆಯ ‘ಬಿ ಎ ಹೋಪ್ ಫಾರ್ ಪ್ರಶಾಂತ್’ ಕರೆ ಬೆಂಬಲಿಸಿ ಕೆನರಾದ ಸಹಸಂಸ್ಥೆ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ಟೆಮ್ ಸೆಲ್ ಅಭಿಯಾನವನ್ನು ಬೆಂಬಲಿಸಿದ್ದಾರೆ. ತನ್ಮೂಲಕ ಬ್ಲಡ್ ಕ್ಯಾನ್ಸರ್ ವಿರುದ್ಧ ಹೋರಾಡುವ ಈ ಮಹತ್ವದ ಅಭಿಯಾನದಲ್ಲಿ ಯುವಜನತೆಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಡಿಕೆಎಂಎಸ್ ಹಾಗೂ ಬಿಎಂಎಸ್ಟಿ ಸಂಸ್ಥೆಯ ವತಿಯಿಂದ ನಡೆದ ಈ ನೋಂದಣಿ ಪ್ರಕ್ರಿಯೆಯಲ್ಲಿ 165ರಷ್ಟು ವಿದ್ಯಾರ್ಥಿಗಳು, ಶಿಕ್ಷಕರು ನೋಂದಣಿ ಮಾಡಿಸಿಕೊಂಡರು. ನೋಂದಣಿಯಲ್ಲಿ ಸಂಗ್ರಹಿಸಲಾದ ಸ್ಯಾಂಪಲ್ ಗಳು ಅರ್ಹತೆ ಪಡೆದಲ್ಲಿ ಸ್ಟೆಮ್ ಸೆಲ್ ದಾನಿಗಳ ಜಾಗತಿಕ ಪಟ್ಟಿಗೆ ಮಾಹಿತಿ ಸೇರಿಕೊಳ್ಳುತ್ತದೆ. ಅಗತ್ಯವಿರುವವರಿಗೆ ಸರಿಹೊಂದುವ ದಾನಿಯ ರಕ್ತದ ಪ್ಲೆಟ್ಲೆಟ್ಗಳ ಮೂಲಕ ಸ್ಟೆಮ್ ಸೆಲ್ ಪ್ರತ್ಯೇಕಿಸಿ ಅರ್ಹರಿಗೆ ನೀಡುವ ಅಂತಿಮ ಹಂತದ ಪ್ರಕ್ರಿಯೆ ಬೇಕಿದ್ದರೆ ಮಾತ್ರ ನಡೆಯುತ್ತದೆ ಎಂದು ಸ್ಟೆಮ್ ಸೆಲ್ ರಿಜಿಸ್ಟ್ರಿ ಇಂಡಿಯಾದ ದಾನಿಗಳು ಮತ್ತು ಮಾಹಿತಿ ನಿರ್ವಹಣೆಯ ಮುಖ್ಯಸ್ಥೆ ಶಾಲಿನಿ ಗಂಭೀರ್ ಹೇಳಿದರು. ತಂಡದ ವೈಶಾಖ್ ಷಾಜಿ ಹಾಗೂ ಶಿಲ್ಪಾ ಯೋಗೀಶ್, ಕಾಲೇಜಿನ ಎನ್ನೆಸ್ಸೆಸ್ ವಿಭಾಗ ಮುಖ್ಯಸ್ಥ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ಕಾರಣ- ಪ್ರೇರಣೆ
ಕೆನರಾ ಸಿಬಿಎಸ್ಸಿ ಶಾಲಾ ದೈಹಿಕ ಶಿಕ್ಷಕ 37ರ ಹರೆಯದ ಪ್ರಶಾಂತ್ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಟೆಮ್ ಸೆಲ್ ಅಭಿಯಾನದ ಜಾಗೃತಿ ಮೂಡಿಸುವ, ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡುವ ಈ ಚಿಂತನೆಗೆ ಚಾಲನೆ ಸಿಕ್ಕಿದೆ. ಈ ಹೋರಾಟದ ನಡುವೆ ಪ್ರಶಾಂತ್ ಅವರನ್ನೂ ಉಳಿಸಿಕೊಳ್ಳಬೇಕು ಎನ್ನುವ ಕನಸೂ ಇದೆ.
ಸ್ಟೆಮ್ ಸೆಲ್ ದಾನಿಗಳ ನೋಂದಣಿಯೇ ಮೊದಲ ಹಂತ. ಹದಿನೆಂಟು ವರ್ಷ ಮೇಲ್ಪಟ್ಟ ಅರ್ಹ ಆಸಕ್ತರ ನೋಂದಣಿ ಪ್ರಕ್ರಿಯೆ ಸರಳವಾದರೂ ದುಬಾರಿ. ಆದರೆ ಸ್ಟೆಮ್ ಸೆಲ್ ರಿಜಿಸ್ಟ್ರಿ ಇಂಡಿಯಾ ಸಂಸ್ಥೆ ಇದನ್ನು ಉಚಿತವಾಗಿ ನಡೆಸಿಕೊಡುತ್ತಿದೆ.
ಆಸಕ್ತರಿಗಿದೆ ಅವಕಾಶ
ಸ್ಟೆನ್ ಸೆಲ್ ದಾನಿಗಳಾಗಿ ನೋಂದಾವಣೆ ಮಾಡ ಬಯಸುವ ಆಸಕ್ತರಿಗಾಗಿ ಮಾ30ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಕೆನರಾ ಹೈಸ್ಕೂಲ್ ಮೈನ್ನ ಶ್ರೀ ಭುವನೇಂದ್ರ ಸಭಾಭವನದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೋಂದಣಿ ಕಾರ್ಯಕ್ರಮ ನಡೆಯಲಿದೆ.
ಸ್ಟೆಮ್ ಸೆಲ್ ನೋಂದಣಿ ಬಗ್ಗೆ ನಮ್ಮ ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲ. ಇದೊಂದು ಆರೋಗ್ಯಕ್ಕೆ ಹಾನಿಕರವಲ್ಲದ, ಅಪಾಯವೂ ಇಲ್ಲದ ಸರಳ ಪ್ರಕ್ರಿಯೆ. ಇದಿರಂದ ಬ್ಲಡ್ ಕ್ಯಾನ್ಸರ್ ಗೆ ತುತ್ತಾದವರಿಗೆ ಜೀವದಾನಕ್ಕೊಂದು ಅವಕಾಶ ದೊರೆಯುತ್ತದೆ. ನಮ್ಮ ಶಾಲೆಯ ಪ್ರಶಾಂತ್ ಅವರಂತಹ ಅನೇಕ ರೋಗಿಗಳ ಬದುಕಲ್ಲಿ ಬೆಳಕಾಗುವ ಸಾಧ್ಯತೆಯೂ ಇರುತ್ತದೆ. ಸಮಾಜಕ್ಕೆ ಲಾಭವಾಗಬೇಕು ಎನ್ನುವುದೇ ನಮ್ಮ ಕನಸು ಎಂದು ಕೆನರಾ ಸಿಬಿಎಸ್ಸಿ ಪ್ರಾಂಶುಪಾಲ ಜಾಯ್ ಜೆ ರೈ ಹೇಳುತ್ತಾರೆ.