ಮಂಗಳೂರು: ತಲೆಗೆ ಗಂಭೀರವಾಗಿ ಗಾಯಗೊಂಡು ಕಳೆದ 6 ತಿಂಗಳಿನಿಂದ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ಣ ಗ್ರಾಮದ ರಿಶೆಲ್ ಪಿಂಟೋ(23) ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕಾಶಿಪಟ್ಣ ಗ್ರಾಮದ ರಿಚರ್ಡ್ ಪಿಂಟೊ ಮತ್ತು ಮೇರಿ ಪಿಂಟೊ ದಂಪತಿಯ ಮೊದಲ ಪುತ್ರಿಯಾದ ರಿಶೆಲ್ ಬೆಂಗಳೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಬಿಎ ವ್ಯಾಸಂಗವನ್ನು ಮಾಡುತ್ತಿದ್ದರು. ಅಲ್ಲಿ ಮೆಟ್ಟಿಲಿನಿಂದ ಜಾರಿ ಬಿದ್ದ ರಿಶೆಲ್ ತಲೆಗೆ ಗಂಭೀರವಾದ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರಿನ ಆಸ್ಪತ್ರೆಯಲ್ಲಿ ಎರಡು ವಾರ ಚಿಕಿತ್ಸೆ ಪಡೆದ ಬಳಿಕ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗಳನ್ನು ಉಳಿಸುವುದಕ್ಕೆ ಪೋಷಕರು ತಮ್ಮ ಆಸ್ತಿ ಮಾರಾಟ ಮಾಡಿ ದಾನಿಗಳ ನೆರವಿನೊಂದಿಗೆ ಸುಮಾರು 28 ಲಕ್ಷದಷ್ಟು ಖರ್ಚು ಚಿಕಿತ್ಸೆಗಾಗಿ ಮಾಡಿದ್ದಾರೆ.
ಪ್ರತಿಬಾನ್ವಿತ ವಿದ್ಯಾರ್ಥಿನಿಯಾದ ರಿಶೆಲ್ ಎಸ್ಎಸ್ ಎಲ್ ಸಿ ಯಲ್ಲಿ ಶೇ 90ರಷ್ಟು ಅಂಕವನ್ನು ಪಡೆದುಕೊಂಡಿದ್ದರು. ಈಕೆ ಪಿಯುಸಿಯನ್ನು ಮೂಡುಬಿದಿರೆಯ ಜೈನ್ ಕಾಲೇಜಿನಲ್ಲಿ, ಪದವಿಯನ್ನು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಜೈನ್ ಯೂನಿರ್ವಸಿಟಿಯಲ್ಲಿ ಅಭ್ಯಾಸ ಮಾಡುತ್ತಿದ್ದರು.
ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರು ಮತ್ತು ಸಹೋದರ ಇದ್ದಾರೆ.