ಬೆಳ್ತಂಗಡಿ: ಸಶಕ್ತ ಭಾರತ ನಿರ್ಮಾಣವಾಗಬೇಕಾದರೆ ಸಶಕ್ತ ಸಂಸದ ಅಗತ್ಯ. 2014ರಲ್ಲಿ ಸಾಕ್ಷಿ ಪ್ರಜ್ಞೆ ಜಾಗೃತವಾದಾಗ ಅಂದಿನ ಚಾಯಿವಾಲ ಈಗಿನ ಚೌಕಿದಾರ ಆದರು. ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಗಳೆಂಬ ದೊಡ್ಡ ಸಂಗ್ರಾಮ ಮತದಾರರ ಮುಂದಿದೆ. ಭಾರತದ ಭವಿಷ್ಯಕ್ಕಾಗಿ ಯೋಗ್ಯರನ್ನು ಆಯ್ಕೆ ಮಾಡುವ ನಿರ್ಣಾಯಕ ಚುನಾವಣೆ ಭಾರತೀಯರಿಗೆ ಎದುರಾಗಿದೆ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್ ಅಭಿಪ್ರಾಯಪಟ್ಟರು.
ಅವರು ಉಜಿರೆಯ ಶಿವಾಜಿನಗರದಲ್ಲಿ ಜರಗಿದ ಪ್ರಬುದ್ಧರ ಗೋಷ್ಠಿಯಲ್ಲಿ ವರ್ತಮಾನದ ತಲ್ಲಣ ಭವಿಷ್ಯದ ಭಾರತ ಕುರಿತು ಮಾತನಾಡಿದರು.
ಈಗಿಂದೀಗಲೇ ಜಾಗೃತವಾಗಬೇಕಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ದುರಾಡಳಿತಕ್ಕೆ ಸಿಲುಕಿ ಪಶ್ಚಾತಾಪ ಪಡಬೇಕಾದಿತು. ಸಂಸದರೊಂದಿಗೆ ನೇರ ಸಂಪರ್ಕ ಹೊಂದುವುದಕ್ಕಾಗಿ ಮೋದಿ ಅನೇಕ ಯೋಜನೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದ್ದಾರೆ. ಭ್ರಷ್ಟಾಚಾರ, ಹಣದುಬ್ಬರ, ಆಂತರಿಕ ಅಭದ್ರತೆ, ಭಯೋತ್ಪಾದಕರ ದಾಳಿ, ಮಹಿಳೆಯರ ಅಸುರಕ್ಷತೆ ಇತ್ಯಾದಿ ಹತ್ತು ಹಲವು ಸಮಸ್ಯೆಗಳಿಂದ ಪೀಡಿತವಾದ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಮುದ್ರಾ ಯೋಜನೆ, ಆಯಷ್ಮಾನ್ ಭಾರತ್, ಉಚಿತ ಅಡುಗೆ ಅನಿಲ ವಿತರಣೆ ಮೊದಲಾದ 146 ಯೋಜನೆಗಳ ಮೂಲಕ ಸರಕಾರದ ನೆರವು ನೇರವಾಗಿ ಫಲಾನುಭವಿಗಳಿಗೆ ದೊರಕುವಂತೆ ಮಾಡಲಾಗಿದೆ. ಸಮಾಜದಲ್ಲಿ ಜಾತಿ-ಮತ ಬೇಧವಿಲ್ಲದೆ ಸಮತೋಲನ ಮೂಡಿಬಂದಿದೆ ಎಂದರು.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದೊಂದಿಗೆ ನೇರ, ಪಾರದರ್ಶಕ ಹಾಗೂ ಸದೃಢ ಆಡಳಿತದಿಂದ ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವದ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇನ್ನೊಮ್ಮೆ ಅವರು ಪ್ರಧಾನಿ ಆಗುವುದು ಖಚಿತ ಎಂದು ಮಾಳವಿಕ ವಿಶ್ವಾಸ ವ್ಯಕ್ತಪಡಿಸಿದರು. ಇಂದು ವಿಚಾರವಂತರು ಹಾಗೂ ನಗರ ವಾಸಿಗಳು ಮತದಾನ ಮಾಡುವುದು ಕಡಿಮೆಯಾಗಿದೆ. ಎಲ್ಲರೂ ಮತದಾನ ಮಾಡಬೇಕೆಂದು ಅವರು ಮನವಿ ಮಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ತಮುಖ್ ರವೀಂದ್ರ ಮಾತನಾಡಿ, ದೇಶದ ಹಿತಚಿಂತಕರ ಕೊರತೆ ನಮ್ಮ ಮುಂದಿರುವ ಸವಾಲು. ತಾನು ತನ್ನ ಕುಟುಂಬದ ಏಳಿಗೆ ಮಾತ್ರ ಬಯಸುವವರಾಗದೆ ನಾಳಿನ ಒಳಿತಿಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಚುನಾವಣಾ ಸಂಯೋಜಕ ನಾ. ಸೀತಾರಾಮ, ಶಾಸಕ ಹರೀಶ್ ಪೂಂಜ, ಡಾ. ಎಂ.ಎಂ ದಯಾಕರ್ ಉಪಸ್ಥಿತರಿದ್ದರು. ಪ್ರಬುದ್ಧರ ಗೋಷ್ಠಿಯಲ್ಲಿ ಪ್ರಾಧ್ಯಾಪಕರು, ಇಂಜಿನಿಯರ್, ವೈದ್ಯರು, ಉದ್ಯಮಿಗಳು, ನಿವೃತ್ತ ಸರಕಾರಿ ನೌಕರರು ಭಾಗವಹಿಸಿದ್ದರು. ಡಾ. ಅನಿತಾ ದಯಾಕರ್ ಸ್ವಾಗತಿಸಿದರು.