ಮಂಗಳೂರು: ವಿಶ್ವದಲ್ಲಿ ಮಕ್ಕಳಿಗೆ ತಗಲುವ ಹಾಗು ಗುಣಪಡಿಸಲಾಗದ ಮಾರಕ ರೋಗ ಪೋಲಿಯೋ ನಿರ್ಮೂಲನಕ್ಕೆ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಸಲ್ಲಿಸಿದ ನಿಸ್ವಾರ್ಥ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಮಲೇರಿಯಾ ವೈದ್ಯಾಧಿಕಾರಿ ಡಾ.ನವೀನ್‍ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ಹೊಟೇಲ್ ನಲ್ಲಿ ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಜರಗಿದ “ವಿಶ್ವ ಪೋಲಿಯೋ ದಿನಾಚರಣೆ” ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರೋಟರಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
1985 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜತೆಗೂಡಿ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಪ್ರಾರಂಭಿಸಿದ “ಪೋಲಿಯೋ ಪ್ಲಸ್” ಅಭಿಯಾನವನ್ನು ಸ್ಮರಿಸಿ ಇಂದು ವಿಶ್ವವು ಪೋಲಿಯೋ ರೋಗದಿಂದ ಮುಕ್ತವಾಗಿದ್ದು 2011 ರಲ್ಲಿ ಕೇಂದ್ರ ಸರಕಾರವು ದೇಶವು ಪೋಲಿಯೋ ಮುಕ್ತ ಎಂದು ಘೋಷಿಸಿದೆ ಎಂದು ಮಾಹಿತಿ ನೀಡಿದರು. ರೋಟರಿ ಸಂಸ್ಥೆಯ ಮುಖ್ಯ ಧ್ಯೇಯ, ಉದ್ದೇಶ ಪೋಲಿಯೋ ಮುಕ್ತ ವಿಶ್ವವಾಗಿದ್ದು ಈ ಮಾರಕ ರೋಗ ಮರುಕಳಿಸದಂತೆ ಸರಕಾರವು ಮಕ್ಕಳಿಗೆ ವರ್ಷಂಪ್ರತಿ ಮುಂಜಾಗ್ರತ ಕ್ರಮವಾಗಿ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ವಿವರ ನೀಡಿದರು.
ರೋಟರಿ ಜಿಲ್ಲಾ 3181ರ ಜಿಲ್ಲಾ ಪೋಲಿಯೋ ಪ್ಲಸ್ ಸಮಿತಿಯ ಅಧ್ಯಕ್ಷರಾದ ರೋ| ಡಾ| ನೋರ್ಮನ್ ಮೆಂಡೋಸಾರವರು ಗೌರವ ಅತಿಥಿಯಾಗಿ ಪಾಲ್ಗೊಂಡು ರೋಟರಿ ಸಂಸ್ಥೆಯ ಪೋಲಿಯೋ ನಿರ್ಮೂಲನೆ ಅಭಿಯಾನದ ಬಗ್ಗೆ ವಿವರ ನೀಡಿ, ಸಾಧಿಸಿದ ಸಾಧನೆಯ ಅಂಕಿ ಅಂಶವನ್ನು ಮಂಡಿಸಿದರು. 2018 ರ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಪಾಕಿಸ್ತಾನದಲ್ಲಿ ಮತ್ತು ಅಪಘಾನಿಸ್ತಾನದಲ್ಲಿ ಒಟ್ಟು 33 ಪೋಲಿಯೋ ರೋಗ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಅಧ್ಯಕ್ಷ ರೋ.ಡಾ.ರಂಜನ್ ಅವರು ತಮ್ಮ ಅಧಕ್ಷೀಯ ಭಾಷಣದಲ್ಲಿ ರೋಟರಿ ಲಸಿಕೆ ಸಂಶೋಧಿಸಿದ ತಂಡದ ನಾಯಕರಾದ ವಿಜ್ಞಾನಿ ಜೋನಸ್ ಸಾಕ್ ಅವರ ಜನ್ಮದಿನಾಚರಣೆ ಅಂಗವಾಗಿ ವಿಶ್ವ ಪೋಲಿಯೋ ದಿನಾಚರಣೆ ಆಚರಿಸಲಾಗುತ್ತಿದ್ದು ಅದರ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಜನವರಿ 19, 2020 ರಂದು ನಗರದಲ್ಲಿ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮವಿದ್ದು ಇದನ್ನು ಯಶಸ್ವಿಗೊಳಿಸಲು ಸರ್ವ ಸದಸ್ಯರ ಸಹಕಾರ ಕೋರಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ರೋ| ಪ್ರಶಾಂತ್ ರೈ ಉಪಸ್ಥಿತರಿದ್ದರು. ವೆನ್‍ಲಾಕ್ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ರೋ| ಡಾ| ಸುಧಾಕರ್‍ರವರು ವಂದಿಸಿದರು.