ಮೂಡುಬಿದಿರೆ : ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಹಾಗೂ ಪದವಿ ವಿಭಾಗ, ಹೊಸಂಗಡಿ ಗ್ರಾಪಂ, ಸ್ಪಿಯರ್‍ಹೆಡ್ ಪಬ್ಲಿಕೇಶನ್ ಪ್ರೈವೇಟ್ ಲಿಮಿಟೆಡ್ ಮಂಗಳೂರು, ಗ್ಲೋಬಲ್ ಟಿವಿ, ಸಿನೆಟ್, ಎಜುಲಿಂಕ್ ಐಟಿಇಇ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಸಾರಗೊಳ್ಳುವ ವಿಲೇಜ್ ಟಿ.ವಿ ಅನ್ನು ಭಾರತ ಸರ್ಕಾರದ ಹೆರಿಟೇಜ್ ಪ್ರಾಜೆಕ್ಟ್ ನ ಪ್ರಧಾನ ಸಲಹೆಗಾರ ಡಾ.ಸಿ.ವಿ ಆನಂದ ಬೋಸ್ ಹೊಸಂಗಡಿ ಪೇರಿ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಸಾಯಂಕಾಲ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು ಮಾಧ್ಯಮಗಳು ಇಂದು ಹಳ್ಳಿಗಳತ್ತ ಮುಖ ಮಾಡಬೇಕಾಗಿದೆ. ಸತ್ಯ ವಿಚಾರವನ್ನು ವೈಭವೀಕರಿಸಿದರೆ ಮಾತ್ರ ಬದಲಾವಣೆ ಮಾಡಲು ಸಾಧ್ಯ. ಭಾರತ ಇಂದು ಆಧ್ಯಾತ್ಮ, ಪರಂಪರೆ, ಸಂಸ್ಕೃತಿಯಿಂದ ವಿಶ್ವದ ಗಮನಸೆಳೆದಿದೆ. ಶೈಕ್ಷಣಿಕವಾಗಿಯೂ ಭಾರತ ಮತ್ತಷ್ಟು ಸುಧಾರಣೆ ಕಂಡು ಗ್ರಾಮ, ದೇಶದ ಅಭಿವೃದ್ಧಿಯಾಬೇಕೆಂದು ಭಾರತ ಅಭಿಪ್ರಾಯಪಟ್ಟರು.
ಮಂಗಳೂರು ವಿ.ವಿ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ಚಿಂತನೆಗಳನ್ನು ಇಚ್ಛಾಶಕ್ತಿ, ಆತ್ಮವಿಶ್ವಾಸದೊಡನೆ ಕಾರ್ಯರೂಪಕ್ಕೆ ಇಳಿಸಿದಾಗ ಗ್ರಾಮ ಸ್ವರಾಜ್ಯವಾಗುತ್ತದೆ. ಕಂಡ ಕನಸನ್ನು ನನಸು ಮಾಡುವ ಬದ್ಧತೆ ಜನರಲ್ಲಿ ಇದ್ದಾಗ ಗ್ರಾಮದ ಅಭಿವೃದ್ಧಿ ಸಾಧ್ಯ. ಗ್ರಾಮದ ಸಮಸ್ಯೆ, ಸವಾಲುಗಳನ್ನು ಮುಂದಿಟ್ಟುಕೊಂಡು ವಿಲೇಜ್ ಟಿ.ವಿ ಅನಿವಾಸಿ ಭಾರತೀಯರ ಗಮನಸೆಳೆಯಲು ಮುಂದಡಿಯಿಟ್ಟಿರುವುದು ಉತ್ತಮ ಪರಿಕಲ್ಪನೆ. ವಿದ್ಯಾರ್ಥಿಗಳು, ಗ್ರಾಮೀಣ ಜನರು, ಮಾಧ್ಯಮವನ್ನು ಒಗ್ಗೂಡಿಸಿ ಗ್ರಾಮದ ಅಭಿವೃದ್ಧಿ ಮಾಡುವ ಅಭಿಯಾನಗಳಿಗೆ ಮಂಗಳೂರು ವಿಶ್ವವಿದ್ಯಾಲಯ ಸದಾ ಕೈಜೋಡಿಸುತ್ತದೆ ಎಂದರು.
ನವದೆಹಲಿ ಭಾರತೀಯ ಹಣಕಾಸು ನಿಗಮದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ಪಟನಾಯಕ್ ಮುಖ್ಯ ಅತಿಥಿಯಾಗಿದ್ದರು.
ಹೊಸಂಗಡಿ ಗ್ರಾಮದ ಗ್ರಾಮೀಣ ವರದಿಗಾರರಿಗೆ ಲೋಗೋ ಹಸ್ತಾಂತರಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆನವಹಿಸಿದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಸ್ಪಿಯರ್‍ಹೆಡ್ ಗ್ರೂಪ್ ನಿರ್ದೇಶಕ ಎನ್.ವಿ ಪೌಲೋಸ್, ಹೊಸಂಗಡಿ ಗ್ರಾಪಂ ಅಧ್ಯಕ್ಷೆ ಹೇಮಾ ವಸಂತ್, ಸದಸ್ಯ ಹರಿಪ್ರಸಾದ್, ವಿಲೇಜ್ ಟಿ.ವಿ ಪ್ರಾಜೆಕ್ಟ್ ಹೆಡ್ ಶ್ರೀನಿವಾಸ ಪೆಜತ್ತಾಯ ಉಪಸ್ಥಿತರಿದ್ದರು.
ಆನಂದ ಬೋಸ್ ಅವರನ್ನು ಸನ್ಮಾನಿಸಲಾಯಿತು. ಸ್ಪಿಯರ್‍ಹೆಡ್ ಮೀಡಿಯಾದ ಮುಖ್ಯ ಸಲಹೆಗಾರ ಎ.ವಲೇರಿಯನ್ ಡಾಲ್ಮೈಡಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ಮಧುಮಾಲ ಕಾರ್ಯಕ್ರಮ ನಿರೂಪಿಸಿದರು. ಗ್ರಾಪಂ ಸದಸ್ಯ ಶ್ರೀಪತಿ ಉಪಾಧ್ಯಯ ವಂದಿಸಿದರು.