ಬೆಳ್ತಂಗಡಿ: ತಾಲೂಕಿನ ಕಣಿಯೂರು, ನ್ಯಾಯತರ್ಪು, ಓಡಿಲ್ನಾಳ, ಕಳಿಯ ವ್ಯಾಪ್ತಿಯ ನಾಲ್ಕು ಗ್ರಾಮಗಳ ಸುಮಾರು 180ಕ್ಕೂ ಅಧಿಕ ವಿದ್ಯುತ್ ಬಳಕೆದಾರರಿಗೆ ಮೆಸ್ಕಾಂ ಇಲಾಖೆ ಅಕ್ಟೋಬರ್ ತಿಂಗಳ ಬಿಲ್‍ನಲ್ಲಿ ನಿಯಮಿತಕ್ಕಿಂತ ಹೆಚ್ಚು ಬಂದಿದ್ದರಿಂದ ಮೆಸ್ಕಾಂನಿಂದ ಗ್ರಾಹಕರಿಗೆ ವಿದ್ಯುತ್ ಬಿಲ್ ಶಾಕ್ ನೀಡಿದೆ.
ಅಧಿಕ ವಿದ್ಯುತ್ ಬಿಲ್‍ನಿಂದ ಆತಂಕಗೊಂಡ ಗ್ರಾಹಕರು ಸಂಬಂಧಪಟ್ಟ ಇಲಾಖೆಗೆ ಅಲೆದಾಟ ನಡೆಸಿದರೂ ಸಮರ್ಪಕ ಉತ್ತರ ಸಿಗದಿರುವ ಕುರಿತು ಶಾಸಕ ಹರೀಶ ಪೂಂಜರ ಗಮನಕ್ಕೆ ತಂದಿದ್ದರು. ತಕ್ಷಣ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಆದರೂ ಗ್ರಾಹಕರಿಗೆ ಸೂಕ್ತ ಪರಿಹಾರ ಸಿಗದ ಕಾರಣ ಗೇರುಕಟ್ಟೆ ಕಳಿಯ ಸಿಎ ಬ್ಯಾಂಕಿನ ಸಭಾಭವನದಲ್ಲಿ ಸೋಮವಾರ ಶಾಸಕರ ನೇತೃತ್ವದಲ್ಲಿ ಗ್ರಾಹಕರ ಹಾಗೂ ಅಧಿಕಾರಿಗಳ ಸಭೆ ನಡೆಸಿ, ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಅಧಿಕ ಬಿಲ್‍ಗಳು ಬಂದ ಸುಮಾರು 180ಕ್ಕೂ ಹೆಚ್ಚಿನ ಗ್ರಾಹಕರು ಹಾಜರಿದ್ದು, ತಮ್ಮ ಸಮಸ್ಯೆಯನ್ನು ಪ್ರಸ್ತಾವಿಸಿದರು. ನಾವು ಅಧಿಕ ವಿದ್ಯುತ್ ಪಾವತಿಸಲು ಸಾಧ್ಯವಿಲ್ಲ. ಮೀಟರಿನ ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿರಬಹುದು ಎಂದು ಗ್ರಾಹಕರು ಹೇಳಿದರು. ಇದಕ್ಕೆ ಮೆಸ್ಕಾಂ ಅಧಿಕಾರಿಗಳು ಉತ್ತರಿಸಿ, ಮೆಸ್ಕಾಂನಿಂದ ಯಾವುದೇ ತಾಂತ್ರಿಕ ಸಮಸ್ಯೆ ಆಗಿಲ್ಲ. ಈಗಾಗಲೇ ಶಾಸಕರ ಸೂಚನೆಯಂತೆ ಮೀಟರ್‍ಗಳ ಪರಿಶೀಲನೆ ನಡೆಸಲಾಗಿದೆ. ಆದರೆ ಮೆಸ್ಕಾಂನ ಹೊರಗುತ್ತಿಗೆಯ ಬಿಲ್ ರೀಡರ್ ಸ್ಥಳೀಯವಾಗಿ ಒಂದು ವರ್ಷಗಳಿಂದ ಸಮರ್ಪಕ ರೀಡಿಂಗ್ ಮಾಡದೆ ಅಂದಾಜು ಮಾಪನ ಮಾಡಿ ಬಿಲ್ ನೀಡುತ್ತಿದ್ದ ಕಾರಣ ಅಧಿಕ ಬಿಲ್‍ಗಳು ಬರಲು ಕಾರಣವಾಗಿದೆ. ಕಳೆದ ಒಂದೂವರೆ ವರ್ಷದಿಂದ ಸಮರ್ಪಕ ಬಿಲ್ ನೀಡದೆ ಸಮಸ್ಯೆ ಬಂದಿರುವುದು ಗಮನಕ್ಕೆ ಬಂದ ಹಿನ್ನೆಲೆ ಕಳೆದ 6 ತಿಂಗಳ ಮೀಟರ್ ಮಾಪನ ಪರಿಶೀಲಿಸಿದ್ದೇವೆ. ಹೀಗಾಗಿ 10 ರಿಂದ 25 ಸಾವಿರಕ್ಕೂ ಅಧಿಕ ಬಿಲ್ ನೀಡುವ ಅನಿವಾರ್ಯತೆ ಬಂದಿದೆ. ಅಲ್ಲದೆ ಇದರ ಕುರಿತು ಮೇಲಾಧಿಕಾರಿಗಳಿಗೆ ಕ್ರಮಕ್ಕಾಗಿಯೂ ಬರೆಯಲಾಗಿದೆ ಎಂದರು.
ಶಾಸಕ ಹರೀಶ ಪೂಂಜ ಮಾತನಾಡಿ, ಈ ರೀತಿ ವಿದ್ಯುತ್ ಬಿಲ್ ವ್ಯತ್ಯಾಸ ಬಂದಾಗ ಇಲಾಖೆ ಗಮನ ಹರಿಸಬೇಕಿತ್ತು. ಬಿಲ್ ರೀಡರ್ ಹಾಗೂ ಗುತ್ತಿಗೆದಾರನೇ ಹೊಣೆಯೇ ಹೊರತು ಗ್ರಾಹಕರಲ್ಲ. ಅವರಿಗೆ ನ್ಯಾಯ ಒದಗಿಸಿಕೊಡಬೇಕು. ತಪ್ಪಿತಸ್ಥರ ಮೇಲೆ ಎಫ್‍ಐಆರ್ ದಾಖಲಿಸಬೇಕು. ಸಂಬಂಧಪಟ್ಟ ಗುತ್ತಿಗೆದಾರರು ಹಣ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಲು ಮೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಯಾರು ಹೆಚ್ಚುವರಿ ಬಿಲ್‍ಗಳನ್ನು ಪಾವತಿಸಬೇಡಿ ಎಂದು ಗ್ರಾಹಕರಿಗೆ ಸೂಚಿಸಿದರು. ಸಭೆಯಲ್ಲಿ ಗ್ರಾಹಕರ ಪರವಾಗಿ ಧೈರ್ಯ ತುಂಬಿದ ಶಾಸಕರ ಕ್ರಮಕ್ಕೆ ಗ್ರಾಹಕರು ಹರ್ಷ ವ್ಯಕ್ತಪಡಿಸಿದರು. ಗ್ರಾಹಕರು ಮುಖತಃ ಮನವಿಯನ್ನು ನೀಡಿ ನ್ಯಾಯ ಒದಗಿಸುವಂತೆ ವಿನಂತಿಸಿಕೊಂಡರು.
ಸಭೆಯಲ್ಲಿ ಕಳಿಯ ಸಿಎ ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು, ಗ್ರಾಪಂ ಸದಸ್ಯರಾದ ಸುಧಾಕರ ಮಜಲು, ದಿವಾಕರ ಮೆದಿನ ಮತ್ತು ವಿಜಯ ಎಚ್.ಪ್ರಸಾದ್, ಕಳಿಯ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ವಿಜಯ ಗೌಡ, ಮೆಸ್ಕಾಂ ಇಲಾಖೆಯ ಬಂಟ್ವಾಳ ವಿಭಾಗ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಇದ್ದರು.
ಎಚ್ಚೆತ್ತ ಇಲಾಖೆ
ಗೇರುಕಟ್ಟೆ ಪ್ರಕರಣದಿಂದ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡಿದೆ. ಉಳಿದ ಎಲ್ಲ ಸೆಕ್ಷನ್ ವ್ಯಾಪ್ತಿಯ ಮಾಪನ ಕಾರ್ಯನಿರ್ವಹಣೆ ಸಮರ್ಪಕವಾಗಿದೆಯೇ ಎಂಬುದನ್ನು ತಿಳಿಯಲು ಪ್ರತಿ ವಾರ್ಡ್‍ನ ಕನಿಷ್ಠ 5 ಮನೆಗಳ ರೀಡಿಂಗ್ ಪರಿಶೀಲಿಸಲು ಲೈನ್‍ಮೇನ್‍ಗಳಿಗೆ ಸೂಚಿಸಲಾಗಿದೆ.
ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತೆ ತಪ್ಪು ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಿ. ಯಾರಿಗೆ ಸಮಸ್ಯೆ ಬಂದಿದೆ ಅಂತಹ ಗ್ರಾಹಕರ ಪಟ್ಟಿ ತಯಾರಿಸಿ ಸಂಬಂಧಪಟ್ಟ ಗ್ರಾಪಂನಲ್ಲಿಟ್ಟು ಮೆಸ್ಕಾಂ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಹೆಸರು ಬಿಟ್ಟು ಹೋಗಿದ್ದರೆ ಸೇರಿಸಿಕೊಳ್ಳಬೇಕು. ತಾಂತ್ರಿಕ ದೋಷದಿಂದ ಆಗಿದ್ದರೆ ತಕ್ಷಣ ಬಗೆಹರಿಸಬೇಕು. ಇಲಾಖೆಯ ಸಿಬ್ಬಂದಿಯ ಎಡವಟ್ಟಿನಿಂದಾದ ಸಮಸ್ಯೆಗೆ ಗುತ್ತಿಗೆದಾರರೇ ಹೊಣೆಯಾಗುತ್ತಾರೆ. ಗ್ರಾಹಕರು ಅಧಿಕ ಬಿಲ್ ಪಾವತಿಸಬೇಡಿ ಎಂದು ಶಾಸಕ ಹರೀಶ ಪೂಂಜ ತಿಳಿಸಿದ್ದಾರೆ.
ಮೇಲಾಧಿಕಾರಿಗಳಿಗೆ ಮೆಸ್ಕಾಂ ಪತ್ರ
ಪ್ರಸಕ್ತ ಗ್ರಾಹಕರಿಗೆ ಅನಿಯಮಿತ ಬಿಲ್ ಕಟ್ಟಲೇ ಬೇಕಾಗಿರುವುದರಿಂದ ಏಕಾಏಕಿ ಕಟ್ಟಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಗ್ರಾಹಕರು ತಾವು ವ್ಯಯಿಸಿದ ವಿದ್ಯುತ್‍ಗೆ ತಕ್ಕ ಹಣ ಪಾವತಿಸಲೇ ಬೇಕಾಗಿದ್ದು, ಒಮ್ಮೆಲೆ ಹೊರೆಯಾಗುವವರು ಒಂದು ವರ್ಷಗಳವರೆಗೆ ಕಂತಿನ ರೂಪದಲ್ಲಿ ಪಾವತಿ ಮಾಡಲು ಮೆಸ್ಕಾಂ ಸೂಚಿಸಿದೆ. ಈ ಕುರಿತು ಗುತ್ತಿಗೆದಾರರ ಮೇಲೆಯೂ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಮೆಸ್ಕಾಂ ಎಇಇ ಸಿ.ಎಚ್.ಶಿವಶಂಕರ್ ಪತ್ರಿಕೆಗೆ ತಿಳಿಸಿದ್ದಾರೆ.