ಬೆಳ್ತಂಗಡಿ: ನಮ್ಮ ಚಂಚಲ ಮನಸ್ಸುಗಳನ್ನು ಹತೋಟಿಯಲ್ಲಿಟ್ಟು ಕುಡಿತ ಬಿಡುವುದೇ ಹೆಮ್ಮೆಯೆಂದು ಭಾವಿಸಿ ಜೀವನ ಸಾರ್ಥಕಗೊಳಿಸುವುದೇ ಮದ್ಯವರ್ಜನ ಶಿಬಿರಗಳ ಉದ್ದೇಶವಾಗಿದೆ ಎಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು 146ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಗಮಿಸಿರುವ 79 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ದುಶ್ಚಟಕ್ಕೆ ಒಳಗಾದವರು ತನ್ನತನವನ್ನೇ ಮರೆತು ಆರೋಗ್ಯ, ಸಾಮಾಜಿಕ ಗೌರವ, ದೀರ್ಘಾಯುಷ್ಯ, ಆರ್ಥಿಕ ಪರಿಸ್ಥಿತಿ ಮತ್ತು ಬದುಕಿನ ಭದ್ರತೆಯನ್ನೇ ಕಳಕೊಳ್ಳುವ ಪರಿಸ್ಥಿತಿಗೆ ತುತ್ತಾಗುತ್ತಾರೆ. ಪ್ರತಿಯೊಂದು ರಂಗದಲ್ಲಿಯೂ ಸಮಾನ ಆಸಕ್ತರು ಮತ್ತು ಸಮಾನ ಮನಸ್ಕರಿರುತ್ತಾರೆ. ಸಾಂಸ್ಕೃತಿಕ, ಕೃಷಿ, ಸಾಹಿತ್ಯ ಕ್ಷೇತ್ರದ ಸಮಾನ ಮನಸ್ಕರು ಆಯಾ ರಂಗಗಳಲ್ಲಿ ವಿಶೇಷ ಸಾಧನೆ ಮಾಡುವ ಉದ್ದೇಶದೊಂದಿಗೆ ಒಟ್ಟು ಸೇರಿ ಆಲೋಚಿಸುತ್ತಾರೆ. ಆದರೆ ಪರಾಕಾಯ ಪ್ರವೇಶವಾದಂತೆ ತನ್ನ ಶರೀರದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ವ್ಯಸನಕ್ಕೊಪ್ಪಿಸಿ ದಾಸನನ್ನಾಗಿ ಮಾಡುತ್ತದೆ. ಮೋಸ, ಸುಳ್ಳು, ದೋಷ, ತಪ್ಪುಗಳ ಸುಳಿಯಲ್ಲಿ ಸಿಲುಕಿ ನಾನಾ ತರಹದ ಕಠಿಣ ಪರೀಕ್ಷೆಗೆ ತುತ್ತಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮದ್ಯವರ್ಜನ ಶಿಬಿರಗಳು ವಾಸ್ತವಸ್ಥಿತಿಯ ಬದುಕನ್ನು ಪರಿಚಯಿಸುವುದರ ಜೊತೆಗೆ ವ್ಯಸನದಿಂದಾದ ದೋಷಗಳಿಗೆ ಪರಿಹಾರವನ್ನು ನೀಡುತ್ತದೆ. ತನ್ನ ದೋಷವನ್ನು ತಾನೇ ಹೇಳಿಕೊಳ್ಳುವುದು, ತನ್ನ ತಪ್ಪನ್ನು ತಾವೇ ಒಪ್ಪಿಕೊಳ್ಳುವುದು, ತಮ್ಮ ಹಳೆಯ ಜೀವನದ ಬಗ್ಗೆ ಅಸಹ್ಯ ಪಡುವುದೇ ಪರಿವರ್ತನೆಯಾಗಿದೆ. ವಿಶ್ವಾಮಿತ್ರನ ತಪಸ್ಸನ್ನು ಮೇನಕೆ ಭಂಗಪಡಿಸುವ ಪ್ರಯತ್ನದಲ್ಲಿ ಸಫಲವಾಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಹೆಚ್. ಮಂಜುನಾಥ್‍ರವರು ಉಪಸ್ಥಿತರಿದ್ದರು.
8 ದಿನದ ಶಿಬಿರದಲ್ಲಿ ವಿಷಯಾಧಾರಿತ ಮಾಹಿತಿ, ಗುಂಪು ಸಲಹೆ, ವೈಯಕ್ತಿಕ ಸಲಹೆ, ಮನೋ ವೈದ್ಯಕೀಯ ಚಿಕಿತ್ಸೆ, ಆಧ್ಯಾತ್ಮಿಕ ಚಿಂತನೆ, ಯೋಗ, ಇನ್ನಿತರ ಚಟುವಟಿಕೆಗಳೊಂದಿಗೆ ನಡೆಸಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಪಿ. ಚೆನ್ನಪ್ಪ ಗೌಡ, ಶಿಬಿರಾಧಿಕಾರಿಯಾಗಿ ನಾಗರಾಜ್ ಕುಲಾಲ್, ಆರೋಗ್ಯ ಸಹಾಯಕರಾಗಿ ವೆಂಕಟೇಶ್ ಸಹಕರಿಸಿದರು.
ಶಿಬಿರದಲ್ಲಿ ಬೆಂಗಳೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ಹಾವೇರಿ, ಹುಬ್ಬಳ್ಳಿ, ಕೋಲಾರ, ಬೆಳಗಾಂ, ಗೋವಾ, ಗುಲ್ಬರ್ಗ, ಬಿಜಾಪುರ, ಕೊಡಗು, ಕಾಸರಗೋಡು, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಶಿಬಿರಾರ್ಥಿಗಳು ಆಗಮಿಸಿದ್ದರು. ವಿಶೇಷತೆಯೇನೆಂದರೆ, ಶಿಬಿರದಲ್ಲಿ ಇಂಜಿನಿಯರ್ 3 ಮಂದಿ, ಸರಕಾರಿ ಉದ್ಯೋಗಿಗಳು 16, ಖಾಸಗಿ ಉದ್ಯೋಗಿಗಳು 12, ವಕೀಲರು 1, ಸೀನೀಯರ್ ಅಕೌಂಟೆಂಟ್ 1, ವಿದ್ಯಾರ್ಥಿಗಳು 2, ನಿವೃತ್ತ ಸಹಾಯಕ ಕೃಷಿ ಅಧಿಕಾರಿ 1, ಹಾಗೂ ಜಮೀನ್ದಾರರೂ ಭಾಗವಹಿಸಿದ್ದರು.
ಮುಂದಿನ ವಿಶೇಷ ಶಿಬಿರವು ದಿನಾಂಕ:18.11.2019 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.