ಬೆಳ್ತಂಗಡಿ: ಕೋಟಿ ವೆಚ್ಚದಲ್ಲಿ ಗುರುವಾಯನಕೆರೆಯಿಂದ ಕುಂಡದಬೆಟ್ಟುವರೆಗಿನ ರಾಜ್ಯಹೆದ್ದಾರಿಯನ್ನು ಅಗಲೀಕರಣಗೊಳಿಸಿ ಮರುಡಾಮಾರು ಕಾಮಗಾರಿ ಶೀಘ್ರ ನಡೆಸಲಾಗುವುದು. ಕುಕ್ಕೇಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ರೂ. ೧೨.೫೦ಕೋಟಿಗೂ ಅಧಿಕ ಮೊತ್ತವನ್ನು ವಿನಿಯೋಗಿಸಲಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ರವಿವಾರ ಕುಕ್ಕೇಡಿ ಗ್ರಾಮದ ಗೋಳಿಯಂಗಡಿಯಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ ಅಟೋ ರಿಕ್ಷಾ ನಿಲ್ದಾಣ ಹಾಗೂ ಇಂಟರ್‌ಲಾಕ್ ಕಾಮಗಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಳೆದ ೨೦, ೨೫ ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ತಾಲೂಕನ್ನು ಇದೀಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರು.
ಗ್ರಾಮೀಣ ಭಾಗದ ಆಪತ್ಬಾಂಧವರು
ಅಪಘಾತ, ಅನಾರೋಗ್ಯ ಮುಂತಾದ ಕಷ್ಟದ ಸಮಯದಲ್ಲಿ ನೆರವಾಗುವವರು ರಿಕ್ಷಾ ಚಾಲಕರು. ಅವರು ಗ್ರಾಮೀಣ ಭಾಗದ ಜನತೆಗೆ ಆಪತ್ಭಾಂದವರಿದ್ದಂತೆ. ಸಮಾಜದಲ್ಲಿ ಕೆಟ್ಟಶಕ್ತಿಯ ವಿರುದ್ಧ ಹೋರಾಡುವ ಅವರು ಸೌಹಾರ್ದತೆಯ ಪ್ರತೀಕ ಎಂದರು.
ಕುಕ್ಕೇಡಿಗೆ ೧೨.೫೦ ಕೋಟಿ: ಕುಕ್ಕೇಡಿ ಗ್ರಾಮದ ಅಭಿವೃದ್ಧಿಗೆ ಕಳೆದ ಒಂದೂವರೆ ವರ್ಷಗಳಿಂದ ರೂ. ೧೨.೫೦ ಕೋಟಿ ಮೊತ್ತವನ್ನು ವಿನಿಯೋಗಿಸಲಾಗಿದ್ದು, ವೆಂಟೇಡ್ ಡ್ಯಾಂ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಮುಂದಿನ ಗ್ರಾ.ಪಂ. ಚುನಾವಣೆಯಲ್ಲಿ ಕುಕ್ಕೇಡಿ ಗ್ರಾ.ಪಂ. ಆಡಳಿತವನ್ನು ಬಿಜೆಪಿ ಚುಕ್ಕಾಣಿ ಹಿಡಿಯುವ ಮೂಲಕ ಎಲ್ಲರು ಶ್ರಮವಹಿಸಬೇಕು ಎಂದರು.
ವೇಣೂರಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣ: ವೇಣೂರು ಹೃದಯಭಾಗದಲ್ಲಿ ಬಸ್ ನಿಲ್ದಾಣ ಮತ್ತು ಸುಸಜ್ಜಿತ ಅಟೋ ರಿಕ್ಷಾ ನಿಲ್ದಾಣ ಕಾಮಗಾರಿ ಶೀಘ್ರ ಪೂರೈಸಲಾಗುವುದು. ಈಗಾಗಲೇ ಅದರ ನೀಲನಕಾಶೆ ಸಿದ್ದವಾಗಿದೆ. ರಿಕ್ಷಾ ನಿಲ್ದಾಣದ ಒಟ್ಟಿಗೆ ಬಸ್ ನಿಲ್ದಾಣದ ಆಗಬೇಕಾಗಿರುವುದರಿಂದ ಸ್ವಲ್ಪ ಸಮಯ ಬೇಕಾಗಿದ್ದು, ಭರವಸೆ ಈಡೇರಿಸುವುದಾಗಿ ತಿಳಿಸಿದರು.
ಗೋಳಿಯಂಗಡಿ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಪ್ರಗತಿಪರ ಕೃಷಿಕ ಕೆ.ವೈ. ಈಶ್ವರ ಭಟ್ ಮಂಜಲೆಕ್ಕಿ ಅಧ್ಯಕ್ಷತೆ ವಹಿಸಿದ್ದರು. ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಕುಕ್ಕೇಡಿ ಗ್ರಾ.ಪಂ. ಉಪಾಧ್ಯಕ್ಷ ಅಶೋಕ್ ಪಾಣೂರು, ಅಳದಂಗಡಿ ಗ್ರಾ.ಪಂ. ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ಕುಕ್ಕೇಡಿ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ನಿತಿನ್ ಸಾಲ್ಯಾನ್, ವೇಣೂರು ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಆನಂದ ನಾಯ್ಕ, ಉದ್ಯಮಿ ಸತ್ಯರಾಜ್, ಕುಕ್ಕೇಡಿ ಭಾಜಪ ಪಂ. ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್ಯ, ಪ್ರಮುಖರಾದ ಹಾಜಿ ಅಬ್ಬಾಸ್ ಗೋಳಿಯಂಗಡಿ, ಶೇಖರ ಪೂಜಾರಿ, ಕೃಷ್ಣಪ್ಪ, ದಿನಕರ ಕುಲಾಲ್, ವಿ.ಎನ್. ಕುಲಾಲ್, ಉಮೇಶ್ ಕುಲಾಲ್, ಅನಿಲ್ ಹೆಗ್ಡೆ, ಕಾರ್ತಿಕ್, ಗೋಪಾಲ ಶೆಟ್ಟಿ, ಸತೀಶ್ ಕೇರಿಯರ್, ಸುಪ್ರಿತ್ ಜೈನ್ ಉಪಸ್ಥಿತರಿದ್ದರು.
ಉಮೇಶ್ ಕುಲಾಲ್ ನಡ್ತಿಕಲ್ಲು, ವೇಣೂರು ಗ್ರಾ.ಪಂ. ಸದಸ್ಯ ಲೋಕಯ್ಯ ಪೂಜಾರಿ ನಿರೂಪಿಸಿ, ಸೋಮನಾಥ ಕೆ.ವಿ. ವಂದಿಸಿದರು.