ಬೆಳ್ತಂಗಡಿ: ರಾಷ್ಟ್ರಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ನಮ್ಮ ಧರ್ಮ ಕಲಿಸಿಕೊಡುತ್ತದೆ ಎಂದು ಲೋಕಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾ ಭವನದಲ್ಲಿ ಸೋಮವಾರ 87 ನೇ ಸರ್ವ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶವು ನಮ್ಮದೇ ಆದ ಸಂಸ್ಣೃ, ಚಿಂತನೆ, ಪದ್ದತಿಯ ನ್ನು ಹೊಂದಿದೆ. ಎಲ್ಲರನ್ನು ಗೌರವಿಸುವುದೇ ನಮ್ಮ ಉದ್ದೇಶವಾಗಿದೆ. ದೇಶದಲ್ಲಿ ಹಲವಾರು ಮತ, ಸಂಪ್ರದಾಯಗಳು ಇದ್ದರೂ ಅವೆಲ್ಲದರ ಗುರಿ, ದಾರಿ ಅಂತಿಮವಾಗಿ ದೇವರ ಕಡೆಯೇ ಹೋಗುವುದಾಗಿ ಆಗಿದೆ ಎಂದರು.
ಎಲ್ಲರಲ್ಲೂ ಒಂದೇ ರಾಷ್ಟ್ರಭಾವ ಇರಬೇಕು ಎಂಬುದು ನನ್ನ ಚಿಂತನೆಯಾಗಿದೆ. ವ್ಯಕ್ತಿಯ ವ್ಯಕ್ತಿತ್ವದಲ್ಲಿ ಮುಖ್ಯವಾಗಿ ಚಾರಿತ್ಯ ಇರಲೇಬೇಕು. ನಮ್ಮ ಬದುಕಿನಲ್ಲಿ ರಾಷ್ಟ್ರ ಆದ್ಯತೆಯಾಗಿರಬೇಕು. ರಾಷ್ಟ್ರಕ್ಕಾಗಿ ನಾನು ಎಂಬ ಭಾವ ನಮ್ಮಲ್ಲಿ ಸದಾ ಸ್ಪುರಿಸುತ್ತಿರಬೇಕು ಎಂದರು.
ಡಾ. ಹೆಗ್ಗಡೆಯವರು ಸಾಮಾಜಿಕ ಸೇವೆಯ ಮೂಲಕ ಅನೇಕ ಮಂದಿಯಲ್ಲಿ ಆತ್ಮವಿಶ್ವಾಸ ತಂದಿದ್ದಾರೆ. ಜೀವನದಲ್ಲಿ ನಾವು ಏನೆಲ್ಲಾ ಪ್ರಾಪ್ತ ಮಾಡಿಕೊಳ್ಳುತ್ತೇವೆಯೋ ಅದರಿಂದ ಇನ್ನೊಬ್ಬರ ನೋವನ್ನು ಶಮನ ಮಾಡುವಂತಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಇಸ್ಕಾನ್ನ ಇಂಡಿಯನ್ ಲೈಫ್ ಸ್ಟೈಲ್ ಕೋಚ್ ಗೌರ್ ಗೋಪಾಲದಾಸ್ ಅವರು, ಜಪಾನ್ ತಂತ್ರಜ್ಞಾನದಲ್ಲಿ, ಅರಬರು ತೈಲದಲ್ಲಿ, ಜರ್ಮನಿ ಸಮಯಪಾಲನೆಯಲ್ಲಿ, ಅಮೇರಿಕಾ ಲಿಬರ್ಟಿಯಲ್ಲಿ ಗುರುತಿಸಿಕೊಂಡಲ್ಲಿ, ಭಾರತ ಆಧ್ಯಾತ್ಮಿಕತೆಯಲ್ಲಿ ವಿಶೇಷತೆಯನ್ನು ಹೊಂದಿದೆ. ಇದರ ಅಧ್ಯಯನಕ್ಕೆ ವಿದೇಶಿಯರು ಬರುತ್ತಾರೆ. ಆಧ್ಯಾತ್ಮಿಕತೆ ರಿಲಿಜಿಯನ್ನ್ನು ಮೀರಿದ್ದು. ಅದು ಪರಿವರ್ತನೆಯ ಹಾದಿಯನ್ನು ತೋರಿಸುತ್ತದೆ. ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ ಎಂದರು.
ಭಾರತೀಯರು ಬುದ್ಧಿವಂತರು, ಉಳಿತಾಯ ಮನೋಭಾವದವರು ಹಾಗು ಖರ್ಚು ಮಾಡುವವರು ಆದರೆ ಇದು ಭಾರತೀಯತೆ ಅಲ್ಲಾ ಎಂದ ಅವರು ಹುಟ್ಟು ಸಾವಿನ ಮಧ್ಯೆ ಬರುವ ಕಠಿಣತೆ, ಸವಾಲುಗಳನ್ನು ಸ್ವಾಭಾವಿಕವಾಗಿ ಸ್ವೀಕರಿಸಿ ಅದನ್ನು ನಿವಾರಿಸುವಲ್ಲಿ ಯೋಚಿಸಿ ಮುನ್ನಡೆಯಬೇಕು ಎಂದರು.
ಪ್ರತಿಯೊಬ್ಬರಲ್ಲೂ, ಪ್ರತಿ ಸ್ಥಳದಲ್ಲೂ ಒಂದು ವಿಶೇಷ ಶಕ್ತಿ ಇದೆ. ಅದು ನಮ್ಮಿಂದಲೇ ಆಗಿರುವುದು. ಕೊಡುವಂತಹ ಕಲೆಯನ್ನು ರೂಢಿಸಿಕೊಳ್ಳಬೇಕು ಎಂದರು.
ಸ್ವಾಗತಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು, ಧರ್ಮದ ಹೆಸರಿನಲ್ಲಿ ತಪ್ಪು ಕಾರ್ಯಗಳು ನಡೆಯದಿರಲಿ ಎಂಬುದೇ ಈ ಸರ್ವ ಧರ್ಮದ ಘನ ಉದ್ದೇಶ. ಪ್ರತಿಯೊಂದು ಕ್ರಿಯೆ, ವ್ಯವಹಾರ, ಆಚರಣೆಯೂ ಸತ್ಯ, ನಿಷ್ಠೆಗಳಿಂದ ಇದ್ದರೆ ಅದು ಧರ್ಮ. ಈ ದಾರಿ ತಪ್ಪಿದರೆ ಅದುವೇ ಅಧರ್ಮ ಎಂದರು.
ಎಲ್ಲಾ ಧರ್ಮದವರೂ ಸಹ ಶ್ರಧ್ಧೆ, ವಿಶ್ವಾಸ ಹಾಗೂ ಮಾನವೀಯ ಸಂಬಂಧಗಳ ಮೂಲಗಳಿಗೆ ವಿಶೇಷ ಪ್ರಾಶಸ್ತ್ಯವನ್ನು ನೀಡುತ್ತಿರುವುದು ಶ್ಲಾಘನೀಯ. ಜಗತ್ತನ್ನು ಮರೆತು, ಆತ್ಮೋದ್ಧಾರದವನ್ನು ಮಾಡಲಾರೆವು. ನಮ್ಮನ್ನು ಮರೆತು ಜಗದ ಉದ್ಧಾರ ಮಾಡಲಾರೆವು. ನಾವೇ ಸ್ವತಃ ಏಳಬೇಕು ಇತರರನ್ನು ಜಾಗೃತರನ್ನಾಗಿ ಮಾಡಬೇಕು. ಅದುವೇ ಧರ್ಮದ ತಿರುಳು ಎಂದರು.
ವೇದಿಕೆಯಲ್ಲಿ ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಪ್ರೊ.ಎಸ್. ಪ್ರಭಾಕರ್ ಉಪಸ್ಥಿತರಿದ್ದರು.
ಜೀವನ ಮತ್ತು ಧರ್ಮ ಕುರಿತು ಮೈಸೂರಿನ ಫೋಕಸ್ ಅಕಾಡೆಮಿಯ ಮುಖ್ಯಕಾರ್ಯನಿರ್ವಾಹಕ ಡಿ.ಟಿ. ರಾಮಾನುಜಮ್, ರಾಜಕೀಯ ಮತ್ತು ಭಾರತೀಯ ಸಿದ್ಧಾಂತದ ಕುರಿತು ದಿ ಟೈಮ್ಸ್ ಆಫ್ ಇಂಡಿಯದ ಸಹಾಯಕ ಮಹಾಪ್ರಬಂಧಕ ಕದ್ರಿ ನವನೀತ ಶೆಟ್ಟಿ ಹಾಗೂ ಗಾಂಧಿ ಎಂಬ ಪ್ರವಾದಿ ಕುರಿತು ಖ್ಯಾತ ಸಾಹಿತಿ ಬೊಳುವಾರು ಮಹಮದ್ ಕುಂಞÂ ಉಪನ್ಯಾಸ ನೀಡಿದರು.
ಇದೇ ಸಂದರ್ಭ ಸಮ್ಮೇಳನದ ಉದ್ಘಾಟಕರನ್ನು, ಅಧ್ಯಕ್ಷರನ್ನು ಡಾ. ಹೆಗ್ಗಡೆಯವರು ಹಾಗೂ ಉಪನ್ಯಾಸ ನೀಡಿದ ಅತಿಥಿಗಳನ್ನು ಡಿ.ಸುರೇಂದ್ರ ಕುಮಾರ್ ಕ್ಷೇತ್ರದ ಪರವಾಗಿ ಗೌರವಿಸಿದರು.
ಎಸ್‍ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಬಿಯಶೋವರ್ಮ ಹಾಗೂ ಉಪನ್ಯಾಸಕ ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಉಜಿರೆ ಕಾಲೇಜಿನ ಉಪನ್ಯಾಸಕ ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಪಿ. ವಂದಿಸಿದರು.