ಬಂಟ್ವಾಳ: ಬಿ.ಎ. ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಜೀವನ ಸಾಧನೆ ತಿಳಿಸುವ “ಅಬ್ಬಾ” (ಎ ಟ್ರಿಬ್ಯೂಟ್ ಫಾರ್ ಅವರ್ ಫಾದರ್) ಪುಸ್ತಕ ಬಿಡುಗಡೆ ಹಾಗೂ ಸಾಕ್ಷ್ಯಚಿತ್ರ ಅನಾವರಣ ಕಾರ್ಯಕ್ರಮ ಬುಧವಾರ ತುಂಬೆ ಬಿ.ಎ. ಕಾಲೇಜಿನ ಮೈದಾನದಲ್ಲಿ ನಡೆಯಿತು.
ಶಿವಮೊಗ್ಗದ ಬಿಷಪ್ ಫಾದರ್ ಫ್ರಾನ್ಸಿಸ್ ಸೆರಾವೋ ಎಸ್.ಜೆ. ಅವರು “ಅಬ್ಬಾ” ಪುಸ್ತಕವನ್ನು ಬಿಡುಡೆಗೊಳಿಸಿ ಮಾತನಾಡಿ, ಡಾ. ಬಿ.ಅಹ್ಮದ್ ಹಾಜಿ ಅವರ ಹಾದಿಯಂತೆ ಅವರ ಮಕ್ಕಳು ಕೂಡಾ ನಡೆಯುತ್ತಿದ್ದು, ಇವರೂ ಕೂಡಾ ಸಾಮಾಜದ ಉನ್ನತಮಟ್ಟಕ್ಕೇರಲಿ ಎಂದು ಹಾರೈಸಿದರು.
ಕೈಗಾರಿಕೆ, ಶಿಕ್ಷಣ ಕ್ಷೇತ್ರ, ಪರೋಪಕಾರಿ ವ್ಯಕ್ತಿಕ್ವ, ಸಾಮಾಜಿಕ ಮತ್ತು ಸಮುದಾಯ ಸೇವೆಗಳೇ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿದೆ. ಅಹ್ಮದ್ ಹಾಜಿ ಅವರು ಅಧ್ಯಕ್ಷರಾಗಿರುವ ಮುಹಿಯುದ್ದೀನ್ ಎಜುಕೇಶನ್ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ಶೈಕ್ಷಣಿಕ ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬಿ.ಎ. ಕುಟುಂಬದ ಈ ಕಾರ್ಯ ಶ್ಲಾಘನೀಯ ಎಂದ ಅವರು, ಈ ಕಾರ್ಯಕ್ರಮಕ್ಕೆ ತಾನು ಬಹಳ ಮುಕ್ತ ಮನಸಿನಿಂದ ಭಾಗವಹಿಸಿದ್ದು, ತುಂಬಾ ಸಂತಸ ತಂದಿದೆ ಎಂದರು.
ಬಳಿಕ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರನ್ನು ಶಿವಮೊಗ್ಗದ ಬಿಷಪ್ ಫಾದರ್ ಫ್ರಾನ್ಸಿಸ್ ಸೆರಾವೋ ಎಸ್.ಜೆ. ಅವರು ಸನ್ಮಾನಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗಯುತ್ತು ಅವರು “ಅಬ್ಬಾ” ಕಿರುಸಾಕ್ಷ್ಯಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಡಾ. ಅಹ್ಮದ್ ಹಾಜಿ ಈ ಭಾಗದ ಬಹಳ ಜನಪ್ರಿಯ ಹೆಸರು. ಗ್ರಾಮೀಣದ ಜನರಿಗೆ ಉದ್ಯೋಗ ಹಾಗೂ ಶಿಕ್ಷಣ ನೀಡುವ ಮೂಲಕ ಆದರ್ಶ ವ್ಯಕ್ತಿಯಾಗಿರುವ ಇವರು, ನಮ್ಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಇನ್ನಷ್ಟು ಸಮಾಜಸೇವೆ ಮಾಡುವಂತಾಗಲಿ. ಅವರಿಗೆ ದೇವರು ದೀರ್ಘ ಕಾಲದ ಆರೋಗ್ಯ ನೀಡಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ, ಎಲ್ಲ, ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವ ವ್ಯಕ್ತಿತ್ವ ಅಹ್ಮದ್ ಹಾಜಿ ಅವರದ್ದಾಗಿದ್ದು, ಅವರೊಬ್ಬ ಮಾನವತಾವಾದಿ. ಬಹಳಷ್ಟು ಸಮಾಜಸೇವೆ ಮಾಡಿರುವ ಇವರು ನಮ್ಮ ತಾಲೂಕಿನ ಹೆಮ್ಮೆ. ಅಹ್ಮದ್ ಹಾಜಿಯಂತಹ ಮನಸು ದೇವರು ಎಲ್ಲರಿಗೂ ನೀಡಲಿ ಎಂದು ಶುಭ ಹಾರೈಸಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ, ಅಹ್ಮದ್ ಹಾಜಿ ಅವರು ತುಂಬೆ ಗ್ರಾಮದ ಶಿಲ್ಪಿಯಾಗಿದ್ದು, ಅವರ ಸಮಾಜಸೇವೆ ನಮಗೆಲ್ಲರಿಗೂ ಮಾರಿಯಾಗಿದೆ. ತಂದೆ-ತಾಯಿ ಅವರ ಗೌರವದಿಂದ ಕಾಣುವ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಅವಕಾಶ ಸಿಕ್ಕಿರುವುದು ತನ್ನ ಭಾಗ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಎಂಎಲ್‌ಸಿ ಹರೀಶ್ ಕುಮಾರ್, ಬೆಂಗಳೂರಿನ ಟೀಕೇಸ್ ಇನ್‌ಟೀರಿಯರ್ ಸೊಲೂಶನ್ ಪ್ರೈ.ಲಿ. ಟಿ.ಕೆ. ಉಮರ್, ಯೆನೆಪೋಯ ಅಬ್ದುಲ್ಲ ಕುಂಞಿ, ಯೆನೆಪೋಯ ಮುಹಮ್ಮದ್ ಕುಂಞಿ, ಪಿ.ಕೆ. ಗ್ರೂಪ್ ಕ್ಯಾಲಿಕೆಟ್‌ನ ಪಿ.ಕೆ. ಅಹ್ಮದ್, ಶಾಲಾ ಸಂಚಾಲಕ ಬಸ್ತಿವಾಮನ ಶೆಣೈ, ಸೇಂಟ್ ಅಲೋಶಿಯಸ್ ಕಾಲೇಜಿನ ರೆ. ಫಾದರ್ ಡಿ.ವಾಝ್, ಅಹ್ಮದ್ ಹಾಜಿ ಅವರ ಪತ್ನಿ ಬಿಫಾತುಮಾ ಅಹ್ಮದ್ ಹಾಜಿ, ಪುತ್ರರಾದ ಅಬ್ದುಲ್ ಸಲಾಂ, ಮುಹಮ್ಮದ್ ಅಶ್ರಫ್, ಪುತ್ರಿ ಮರಿಯಂ ಶಬಾನಾ ಫೈಝಲ್, ಫೈಝಲ್, ಝಕರಿಯಾ, ಅಕ್ರಂ ಮೊಯ್ದೀನ್, ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಉಪಸ್ಥಿತರಿದ್ದರು.
ಎಸ್‌ಎಂಆರ್ ಸಂಸ್ಥೆಯ ಎಸ್‌ಎಂ ರಶೀದ್ ಹಾಜಿ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮತ್ತಿತರ ಗಣ್ಯರು ಹಾಜರಿದ್ದರು.
ಹುಟ್ಟುಹಬ್ಬ ಆಚರಣೆ
ಇದೇ ಸಂದರ್ಭದಲ್ಲಿ ಮರಿಯಂ ಶಬಾನಾ ಫೈಝಲ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಾದ ಮುಹಮ್ಮದ್ ಉಸ್ಮಾನ್ ಐಮಾನ್ ಹಾಗೂ ಶ್ರವ್ಯಾ ಆರ್ ಅವರು ಹುಟ್ಟುಹಬ್ಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ತುಂಬೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಅವರು ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿ.ಎ. ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಸ್ವಾಗತಿಸಿದರು. ಸೋಫಿಯಾ ಫೈಝಲ್ ಅವರು ಪುಸ್ತಕದ ಕಿರುಪರಿಚಯವಿತ್ತರು. ಹಾಜಿ ಅವರ ಪುತ್ರಿ ಮರಿಯಂ ಶಬಾನಾ ಫೈಝಲ್ ವಂದಿಸಿದರು. ಶಿಕ್ಷಕಿ ನೀತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಅಧೀಕ್ಷಕ ಕಬೀರ್ ಸಹಕರಿಸಿದರು.