ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನಿವಾಸಿಗಳಾಗಿದ್ದು, ಪ್ರಸ್ತುತ ಇಸ್ರೇಲ್ನಲ್ಲಿ ಉದ್ಯೋಗದಲ್ಲಿರುವ 30 ಮಂದಿ ಒಟ್ಟಾಗಿ ಸೇರಿ ರಚಿಸಿದ ‘ಆಶಾಕಿರಣ ಫ್ರೆಂಡ್ಸ್ ಹೆಲ್ಪಿಂಗ್ ಗ್ರೂಪ್’ ವತಿಯಿಂದ ಕರಾವಳಿ ಭಾಗದ ಹಲವು ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
2018 ಮೇ 1ರಂದು ಇಸ್ರೇಲ್ನಲ್ಲಿ ದಿನೇಶ್ ಪುತ್ರನ್ ಅವರ ನೇತೃತ್ವದಲ್ಲಿ ರೈತ ಕುಟುಂಬದ 6 ಮಂದಿ ಆರಂಭಿಸಿದ ಯುವ ಸಂಘಟನೆ ಇದಾಗಿದ್ದು, ಇಂದು 30 ಮಂದಿ ಸದಸ್ಯರನ್ನು ಹೊಂದಿದೆ.
‘ಆಶಾಕಿರಣ ಫ್ರೆಂಡ್ಸ್ ಹೆಲ್ಪಿಂಗ್ ಗ್ರೂಪ್’ ಸಂಘಟನೆ ವತಿಯಿಂದ 2018ರಿಂದ 2020ರ ವರೆಗೆ ಒಂದು ಕುಟುಂಬಕ್ಕೆ ₹ 25 ಸಾವಿರದಂತೆ ತಿಂಗಳಿಗೆ ಎರಡು ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಈತನಕ ₹ 16 ಲಕ್ಷಕ್ಕೂ ಅಧಿಕ ಹಣವನ್ನು ಬಡ ಕುಟುಂಬಕ್ಕೆ ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ನೀಡಲಾಗಿದೆ. ಈತನಕ 62 ಯೋಜನೆಗಳ ಮೂಲಕ ಬಡ ಜನರ ಅಳಿಲು ಸೇವೆಯನ್ನು ಮಾಡುತ್ತಿದೆ.
ಈ ಸಂಘಟನೆಯಿಂದ ಬಡ ರೋಗಗಳಿಗೆ ಆರ್ಥಿಕ ನೆರವು ನೀಡಿರುವುದಲ್ಲದೆ, ವಿಶೇಷವಾಗಿ ಹುತಾತ್ಮ ಸೈನಿಕರ ಕುಟುಂಬಗಳಿಗೆ ಕೂಡ ನೆರವನ್ನು ನೀಡಲಾಗಿದೆ ಎಂದು ಸಂಘಟನೆಯ ಪ್ರಸ್ತುತ ನೇತೃತ್ವ ವಹಿಸಿರುವ ಸಂತೋಷ್ ಪೂಜಾರಿ ತಿಳಿಸಿದ್ದಾರೆ.