ಬೆಳ್ತಂಗಡಿ: ಕರಾವಳಿಯ ಹೆಮ್ಮೆಯ ಯಕ್ಷಗಾನ ಕಲೆಯ ಪ್ರಸಾರ ಕೊರೊನದಿಂದಾಗಿ ಅಲ್ಪ ಮಸಕಾದರೂ ವಾಹಿನಿಗಳ ನೇರ ಪ್ರಸಾರದ ಮೂಲಕ ದೇಶ ವಿದೇಶಗಳ ಕಲಾಭಿಮಾನಿಗಳ ಮನೆ ಮನೆಗೂ ತಲುಪುತ್ತಿರುವುದು ಇದೀಗ ವೇದ್ಯವಾಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಈ ಬಾರಿಯ ಪ್ರದರ್ಶನವನ್ನು ಕ್ಷೇತ್ರದಲ್ಲೇ ಸೇವೆಯಾಟವಾಗಿ ಪ್ರದರ್ಶಿಸಿಯೂ ಟ್ಯೂಬ್ ಮೂಲಕ ನೇರ ಪ್ರಸಾರದಲ್ಲಿ ಕಳೆದ ನ. 19 ರಿಂದ ಮೊದಲ್ಗೊಂಡು ಪ್ರತಿದಿನ ರಾತ್ರಿ 7 ರಿಂದ 12 ರವರೆಗೆ ಬಿತ್ತರಿಸಿ ಯಕ್ಷಗಾನ ಕಲಾಭಿಮಾನಿಗಳಿಗೆ ಮನರಂಜನೆಯ ಜತೆಗೆ ಪೌರಾಣಿಕ ಕಥಾಭಾಗವನ್ನು ಮನೆಮಂದಿಗೆಲ್ಲ ಉಣಬಡಿಸುತ್ತಿದೆ.
ಸೇವಾಕರ್ತರ ನೆರವಿನೊಂದಿಗೆ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಪ್ರದರ್ಶಿಸಲ್ಪಡುತ್ತಿರುವ ಯಕ್ಷಗಾನವನ್ನು ಮೊದಲ ವಾರ ಸುಮಾರು 1.5 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಸರಾಸರಿ 27 ರಿಂದ 30 ಸಹಸ್ರ ಕಲಾಭಿಮಾನಿಗಳು ಯಕ್ಷಗಾನವನ್ನು ಮನೆಯಲ್ಲೇ ಕುಳಿತು ವೀಕ್ಷಿಸುತ್ತಿರುವುದು ವ್ಯಕ್ತಗೊಂಡಿದೆ . ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆ ಹಾಗು ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ “ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ” ಯು ಟ್ಯೂಬ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆಗೊಳಿಸಲಾಗಿದೆ ಹೊರ ಜಿಲ್ಲೆಗಳ ಸೇವಾಕರ್ತರ ಜತೆಗೆ ವಿದೇಶಗಳ ಅಭಿಮಾನಿಗಳೂ ಸೇವೆಯ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಲು ಸಾಧ್ಯವಾಗಿದೆ . ತನ್ಮೂಲಕ ಕ್ಷೇತ್ರದ ಯಕ್ಷಗಾನ ಪ್ರದರ್ಶನ ಹೆಚ್ಚು ಜನಪ್ರಿಯವಾಗಿ ಕಲಾಭಿಮಾನಿಗಳಿಗೆ ರಸದೌತಣ ನೀಡುತ್ತಿದೆ ಎಂದು ಅಭಿಮಾನಿಗಳು ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ . ಮರೆಯಾಗುತ್ತಿರುವ ಪೌರಾಣಿಕ ಪ್ರಸಂಗಗಳನ್ನು ಮತ್ತೆ ನೇರ ಪ್ರಸಾರದ ಮೂಲಕ ಜನರಿಗೆ ತಲುಪಿಸುತ್ತಿರುವ ಯೋಜನೆ ಸರ್ವತ್ರ ಶ್ಲಾಘನೆಗೆ ಪಾತ್ರ ವಾಗಿದೆ . ಅಮರವಾಹಿನಿ, ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ,ಶ್ರೀ ದೇವಿ ಮಹಾತ್ಮೆ ಶ್ರೀ ಕೃಷ್ಣ ಲೀಲಾಮೃತಂ ,ಸುದರ್ಶನ ವಿಜಯ-ಇಂದ್ರಜಿತು ಕಾಳಗ ,ಶಿವ ಪಂಚಾಕ್ಷರಿ ,ಕನಕಾಂಗಿ ಕಲ್ಯಾಣ-ಅಗ್ರಪೂಜೆ , ಹಾಗು ಅಪರೂಪದ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಿ ಜನಮೆಚ್ಚುಗೆ ಗಳಿಸುತ್ತಿರುವುದು ಕಂಡುಬರುತ್ತಿದೆ , ಕ್ಷೇತ್ರದಲ್ಲಿ ಒಂದು ತಿಂಗಳ ಸೇವಾ ಪ್ರದರ್ಶನ ನೀಡಿ ಬಳಿಕ ತಿರುಗಾಟ ನಡೆಸುವ ಕುರಿತು ಚಿಂತನೆ ನಡೆಯುತ್ತಿದೆ.