ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ನಾವೇ ಹಾಗೂ ಅವರ ಕಾಂಗ್ರೆಸ್ ಮುಖಂಡ ಮಾಧವ ಮಾವೆ, ಕನ್ಯಾನ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯ ಕುಮಾರ್ ಭಟ್ ಇಂದು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.
ಇವರೆಲ್ಲರಿಗೂ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಮನಸ್ತಾಪ ಇದ್ದ ಕಾರಣ ಹಾಗೂ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಹೆಚ್ಚು ಕಾಣಿಸಿಕೊಂಡಿದ್ದಲ್ಲದೆ ಕೆಲವೆಡೆ ಬಿಜೆಪಿಗೆ ಸೇರುವುದಾಗಿಯೂ ಹೇಳಿಕೊಂಡಿದ್ದರು. ಅದರಂತೆ ಇಂದು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇವರೊಂದಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದ ಹನೀಫ್ ಪಾರಂಪಳ್ಳಿ ಹಾಗೂ ಅವರ ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳೆಪಾಡಿ, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ರವಿಶಂಕರ್ ಮಿಜಾರ್, ಜಗದೀಶ್ ಶೇಣವ, ಸುದೀಪ್ ಶೆಟ್ಟಿ ಕಣ್ಣೂರು, ರಾಜೇಶ್ ಕಾವೇರಿ ಹಾಗೂ ಇನ್ನೂ ಹಲವರು ಉಪಸ್ಥಿತರಿದ್ದರು.