ಮಂಗಳೂರು: ಸಂಚಾರ ಪೊಲೀಸರು 9 ವರ್ಷದ ಬಾಲಕನ ಸಹಿತ ಕಾರನ್ನು ಟೋಯಿಂಗ್ ಮಾಡಿ ಠಾಣೆಗೆ ಎಳೆದೊಯ್ದ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಮಿಜಾರಿನ ದಿವ್ಯಾ ಎಂಬುವವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದು, ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ಹೋಗಿದ್ದಾರೆ. ಈ ಸಮಯದಲ್ಲಿ ಕಾರು ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ ಪ್ರಖ್ಯಾತ್ ಕಾರಿನಲ್ಲೇ ಇದ್ದರು. ದಿವ್ಯಾ ಅವರು ಮೊಬೈಲನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದನ್ನು ಗಮನಿಸಿದ ಚಾಲಕ ಅದನ್ನು ದಿವ್ಯಾರಿಗೆ ನೀಡಲೆಂದು ಹೋದಾಗ ಇತ್ತ ಪೊಲೀಸರು ಮಗುವಿನ ಸಹಿತ ಕ್ಷಣಾರ್ದದಲ್ಲಿ ಕಾರನ್ನು ಟೋಯಿಂಗ್ ಮಾಡಿದ್ದಾರೆ.
ಕಾರು ಹಾಗೂ ಮಗು ಕಣದಿದ್ದರಿಂದ ಗಾಬರಿಗೊಂಡ ಚಾಲಕ ಮತ್ತು ದಿವ್ಯಾ ಹಲವೆಡೆ ಮಗುವಿಗಾಗಿ ಹುಡುಕಾಡಿದ್ದಾರೆ. ಕೊನೆಗೆ ಸ್ಥಳೀಯರ ಸಹಕಾರದಿಂದ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ್ದು, ಕದ್ರಿ ಪೊಲೀಸರು ಟೋಯಿಂಗ್ ಮಾಡಿರುವುದು ಗೊತ್ತಾಗಿದೆ. ಪೊಲೀಸರ ಈ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ನೋ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸಿದರೆ ಪೊಲೀಸರು ಹೊತ್ತೂಯ್ಯುತ್ತಾರೆ ಎಂಬುದು ನನಗೆ ಗೊತ್ತಿತ್ತು. ಹಾಗಾಗಿ ನಾವು ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿಲ್ಲ. ಅದು ರಸ್ತೆ ಕೂಡ ಆಗಿರಲಿಲ್ಲ ಎಂದು ಮಗುವಿನ ತಾಯಿ ದಿವ್ಯಾ ಅವರು ತಿಳಿಸಿದ್ದಾರೆ.
ಸಂಚಾರ ವಿಭಾಗದ ನಟರಾಜನ್ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು ಕಾರು ಫೂಟ್ ಪಾತ್ ಮೇಲೆ ನಿಂತಿತ್ತು. ಜೊತೆಗೆ ಗಾಜಿಗೆ ಟಿಂಟ್ ಕವರ್ ಹಾಕಿದ್ದು, ಸುಮಾರು 15 ನಿಮಿಷ ಕಾದರೂ ಯಾರು ಬಂದಿರಲಿಲ್ಲ ಹಾಗಾಗಿ ಲಾಕ್ ಹಾಕಲಾಯಿತು ಎಂದಿದ್ದಾರೆ.