ಕಾಸರಗೋಡು : ಸಾಮಾಜಿಕ ಪ್ರತಿಬದ್ದತೆಯೊಂದಿಗೆ ಕಾರ್ಯನಿರ್ವಹಿಸುವ ಅನಿವಾರ್ಯತೆ ಪತ್ರಕರ್ತರಿಗಿದ್ದರೂ, ಮಿತಿ ಎಂಬುದಿಲ್ಲ. ತಮ್ಮದೇ ಆದ ಶಕ್ತಿ ಸಾಮರ್ಥ್ಯಗಳಿಗೆ ಅನುಸಾರ ಸುಸ್ಥಿರ ಸಾಮಾಜ ನಿರ್ಮಾಣವೇ ಪತ್ರಿಕೋದ್ಯಮದ ಅಂತಿಮ ಲಕ್ಷö್ಯವಾಗಿದೆ. ನಿರಂತರ ಚಾಕಚಕ್ಯತೆಗಳಿಂದ ಸಮಾಜದ ಸಮಗ್ರತೆಯನ್ನು ಎತ್ತಿಹಿಡಿಯುವ ಪತ್ರಕರ್ತರ ಅಹರ್ನಿಶಿ ಸೇವೆ ಪ್ರಜಾಪ್ರಭುತ್ವದ ಪ್ರಧಾನ ಆಧಾರ ಸ್ತಂಭವಾಗಿ ಬೆಂಬಲವಾಗಿದೆ ಎಂದು ಕರ್ನಾಟಕ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಹಾಗೂ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕುಂಬಳೆ ಸಮೀಪದ ನಾರಾಯಣಮಂಗಲ ಎ.ಎಲ್.ಪಿ ಶಾಲೆಯ ಎಂ.ವಿ.ಬಳ್ಳುಳ್ಳಾಯ ವೇದಿಕೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಾರಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೃತ್ತಿಯ ಮೂಲಕ ಸಾಮಾಜಿಕ ಸುಧಾರಣೆಯ ಬೆಂಬತ್ತಿ ಸಾಗುವ ಪತ್ರಕರ್ತರ ವೈಯುಕ್ತಿಕ ಬದುಕು ಸಂಕಷ್ಟಮಯವಾಗಿರುತ್ತದೆ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಸಮಾಜದ ಚಿಕಿತ್ಸಕನಾಗಿ,, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಯುತ್ತಾ ಸಾಗುವ ಪತ್ರಕರ್ತರ ಬದುಕಿಗೆ ಸಂಘನಾತ್ಮಕ ಶಕ್ತಿ ನಿಡುವಲ್ಲಿ ಪತ್ರಕರ್ತರ ಸಂಘ ನಿರ್ವಹಿಸುವ ಚಟುವಟಿಕೆಗಳು ಶ್ಲಾಘನೀಯ ಎಂದವರು ತಿಳಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಹಲವು ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು . ಗಡಿನಾಡಿನ ಕನ್ನಡಿಗರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದರು.
ಸಮಾರಂಭವನ್ನು ದೀಪ ಬೆಳಗಿಸಿ ಚಾಲನೆ ನೀಡಿ, ಪ್ರಶಸ್ತಿ ಪ್ರದಾನಗೈದು ಮಾತನಾಡಿದ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು, ಗಡಿನಾಡು ಕಾಸರಗೋಡಿನ ಕನ್ನಡ ಅಸ್ತಿತ್ವವನ್ನು ಕಾಪಾಡುವಲ್ಲಿ ಕನ್ನಡ ಪತ್ರಿಕೆಗಳು ಮತ್ತು ಪತ್ರಕರ್ತರ ಕೊಡುಗೆ ಮಹತ್ತರವಾದುದು. ಇಲ್ಲಿಯ ಕನ್ನಡ ಪರ ಚಟುವಟಿಕೆಗಳಿಗೆ ಬೆಂಬಲವಾಗಿ ಕನ್ನಡ ಪತ್ರಿಕೆಗಳು ಸದಾ ಜೊತೆಗಿವೆ. ಆದರೆ, ಸ್ವಂತ ಬದುಕನ್ನೂ ಕಟ್ಟಿಕೊಳ್ಳುವಲ್ಲಿ ಚಿಂತನೆಗಳು ಬೇಕು. ಸಾಮಾಜಿಕ ಕಳಕಳಿಯ ಧನಾತ್ಮಕ ಶಕ್ತಿ ನೀಡುವ ವರದಿಗಳು ಇನ್ನಷ್ಟು ಮೂಡಿಬರಬೇಕು ಎಂದು ಆಶೀರ್ವಚನ ನೀಡಿದರು.
ಪಾಣಕ್ಕಾಡ್ ಸಯ್ಯದ್ ಮುನನ್ವರಲಿ ಶಿಹಾಬ್ ತಂಙಳ್ ಉಪಸ್ಥಿತರಿದ್ದು ಮಾತನಾಡಿ, ಸಾಮಾಜಿಕ ಏಕತೆ, ದೃಢತೆಗಳನ್ನು ಪರಿಪೋಶಿಸುವ ಉತ್ತಮ ವರದಿಗಾರಿಕೆ ನಿಜವಾಗಿಯೂ ಒಂದು ಕಲೆಯಾಗಿದ್ದು, ನಾವು ನೋಡುವ ದೃಷ್ಟಿಕೋನ ಬದಲಾಗಬೇಕು. ಸತ್ ಚಿಂತನೆಯ ಉತ್ತಮ ವರದಿ ಐಶ್ವರ್ಯದ ಸಂಕೇತ. ಈ ನಿಟ್ಟಿನಲ್ಲಿ ಪತ್ರಕರ್ತರು ಸವಾಲುಗಳಿಲ್ಲದೆ ಉತ್ತಮ ಮನಸ್ಸಿನಿಂದ ಮುಂದುವರಿಯಲು ಸಂಘಟನೆ ಅಗತ್ಯ ಎಂದು ತಿಳಿಸಿದರು.
ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮಾದ್ಯಮ ತಜ್ಞ ಈಶ್ವರ ದೈತೋಟ, ಕುಂಬಳೆ ಗ್ರಾ.ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಜಿ.ಪಂ.ಸದಸ್ಯೆ ಜಮೀಲಾ ಸಿದ್ದೀಕ್ ದಂಡೆಗೋಳಿ, ಬ್ಲಾ.ಪಂ.ಸದಸ್ಯೆ ಪ್ರೇಮಾ ಶೆಟ್ಟಿ, ಗ್ರಾ.ಪಂ.ಸದಸ್ಯೆ ಸುಲೋಚನಾ ಪಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್, ನಾರಾಯಣಮಂಗಲ ಶಾಲಾ ಆಡಳಿತಾಧಿಕಾರಿ ಗೋಪಾಲಕೃಷ್ಣ ಭಟ್ ಕಬೆಕ್ಕೋಡು, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕರ್ನಾಟಕ ಪತ್ರಕರ್ತರ ಸಂಘದ ಮುಖಂಡರುಗಳಾದ ಸೋಮಶೇಖರ ಕೆರೆಗೋಡು, ಭವಾನಿ ಸಿಂಗ್ ಠಾಕೂರ್, ರಮೇಶ್ ಕುಟ್ಟಪ್ಪ, ಡಿ.ಸಿ.ಲೋಕೇಶ್, ಉದ್ಯಮಿ ಅಬ್ದುಲ್ಲ ಮಾದುಮೂಲೆ ಉಪಸ್ಥಿತರಿದ್ದು ಮತನಾಡಿದರು. ಈ ಸಂದರ್ಭ ಕವಯಿತ್ರಿ ರಜನಿ ನಾಯ್ಕಾಪು ಬರೆದ ಕವನ ಸಂಕಲನವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಬಿಡುಗಡೆಗೊಳಿಸಿದರು.
ಸಮಾರಂಭದಲ್ಲಿ ಎಡನೀರು ಶ್ರೀಕೇಶವಾನಂದ ಭಾರತೀ ಸ್ವಾಮೀಜಿ ದತ್ತಿನಿಧಿ ಪ್ರಶಸ್ತಿಯನ್ನು ಡಾ.ವಾಣಿಶ್ರೀ ಉಚ್ಚಿಲ್ ಕರ್, ಹವ್ವಾ ಹಸನ್ ಫೌಂಡೇಶನ್ ಕುದ್ಕುಳಿ ಪ್ರಶಸ್ತಿಯನ್ನು ಡಾ.ಸದಾನಂದ ಪೆರ್ಲ, ಡಾ.ಸಿ.ಸೋಮಶೇಖರ್ ದತ್ತಿನಿಧಿ ಪ್ರಶಸ್ತಿಯನ್ನು ಜಯಪ್ರಕಾಶ್ ಶೆಟ್ಟಿ ಉಪ್ಪಳ, ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಪ್ರಶಸ್ತಿಯನ್ನು ಮುಹಮ್ಮದ್ ಆರಿಫ್ ಪಡುಬಿದ್ರೆ, ಕೆ.ವಿ.ಆರ್.ಠಾಗೂರ್ ಪ್ರಶಸ್ತಿಯನ್ನು ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ, ಪ್ರಚೋದಯ ದತ್ತಿನಿಧಿ ಪ್ರಶಸ್ತಿಯನ್ನು ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹಾಗೂ ಪ್ರಭಾಕರ ಕಲ್ಲೂರಾಯ ಬನದಗದ್ದೆ ಪ್ರಶಸ್ತಿಯನ್ನು ಬಿ.ಆರ್.ಸವಿತಾ ರೈ ಮಡಿಕೇರಿ ಅವರಿಗೆ ಈ ಸಂದರ್ಭ ಪ್ರದಾನಮಾಡಲಾಯಿತು.
ಒತೆಗೆ ಯಕ್ಷಗಾನ ಗುರು ಕಂಬಾರು ಕೇಶವ ಭಟ್ ಹಾಗೂ ರಾಜಾ ಆರಿಕ್ಕಾಡಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಮುರಳೀದರ ಯಾದವ್ ನಾಯ್ಕಾಪು ಸ್ವಾಗತಿಸಿ, ಸಂಚಾಲಕ ಎಂ . ಎಸ್ ಥೋಮಸ್ ಡಿ ಸೋಜ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ವಿವಿಧ ತಂಡಗ ಗಳಿಂದ ಭಜನೆ, ಸ್ಥಳೀಯ ಕಲಾವಿದರಿಂದ ವಿವಿಧ ವಿನೋದಾವಳಿ, ನೃತ್ಯ ವೈವಿಧ್ಯ, ತೆಲಿಕೆದ ತೆನಾಲಿ ಕಾರ್ಕಳ ತಂಡದವ ರಿಂದ ತೆಲಿಕೆದ ಬರ್ಸ ಕನ್ನಡ-ತುಳು ಹಾಸ್ಯ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ನಾರಾಯಣಮಂಗಲ ಗಣೇಶ ಮಂದಿರ ಪರಿಸರದಿಂದ ಸಮಾರಂಭದ ವೇದಿಕೆಗೆ ಸಂಭ್ರಮದ ಮೆರವಣಿಗೆ ಮೆರುಗು ನೀಡಿತು.
ದತ್ತಿನಿಧಿ ಪ್ರಶಸ್ತಿ ವಿಜೇತರಲ್ಲಿ ಓರ್ವರಾದ ಡಾ.ಸದಾನಂದ ಪೆರ್ಲ ಅವರು ತಮಗೆ ನೀಡಿದ ದತ್ತಿನಿಧಿ ಪ್ರಶಸ್ತಿ ಮೊತ್ತ ರೂ. ಸಾವಿರ ವನ್ನು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳಿಗೆ ಉದಾರವಾಗಿ ಮರಳಿ ಸುವ ಮೂಲಕ ಪ್ರಶಂಶೆಗೆ ಪಾತ್ರರಾದರು.