ಕಾಸರಗೋಡು: ಬದಿಯಡ್ಕ ಸಮೀಪದ ಮಾನ್ಯ, ಪಟ್ಟಾಜೆ ಪರಿಸರದಲ್ಲಿ ಸೋಮವಾರ. ಮುಂಜಾನೆ ಬೀಸಿದ ಸುಂಟರಗಾಳಿಗೆ ಅಪಾರ ನಾಶ ನಷ್ಟ ಉಂಟಾಗಿದ್ದು, ಐದಕ್ಕೂ ಅಧಿಕ ಮನೆಗಳು ಭಾಗಶಃ ಕುಸಿದಿದೆ.
ನೂರಾರು ಮರಗಳು ಮುರಿದು ಬಿದ್ದಿದೆ. ಕಂಗು, ಬಾಳೆ, ಅಡಿಕೆ, ತೆಂಗು ಗಳು ನಾಶ ಗೊಂಡಿದೆ. ವಿದ್ಯುತ್ ಸಂಪರ್ಕ ಅಸ್ತವ್ಯಸ್ತ ಗೊಂಡಿದೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಮಾನ್ಯ, ಪಟ್ಟಾಜೆ ಹಾಗೂ ಮಲ್ಲಡ್ಕದಲ್ಲಿ ಸುಂಟರ ಗಾಳಿ ಬೀಸಿದ್ದು , ಹಲವು ಮನೆಗಳ ಮಾಡು ಹಾರಿ ಹೋಗಿದೆ.
ಕೆಲ ಮನೆಗಳ ಮೇಲೆ ಹಾಕಲಾಗಿದ್ದ ಶೀಟ್ ಗಳು ಹಲವು ದೂರಕ್ಕೆ ಹಾರಿಹೋಗಿವೆ. ನೂರಾರು ಕಂಗುಗಳು ನೆಲಕಚ್ಚಿವೆ. ಆದರೆ ಜೀವಾಪಾಯವಾದ ಬಗ್ಗೆ ವರದಿಯಾಗಿಲ್ಲ. ಗಾಳಿಯ ಅಬ್ಬರಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಭೇಟಿ
ಕುಂಬ್ಡಾಜೆ ಗ್ರಾಮ ಪಂಚಾಯತ್ ನ ಹಲವೆಡೆ ಸೋಮವಾರ ಮುಂಜಾನೆ ಬೀಸಿದ ಸುಂಟರ ಗಾಳಿಗೆ ಏತಡ್ಕ, ಅನಂತಮೂಲೆ , ಮಲ್ಲಾರ ಹಾಗೂ ಪುತ್ರೋಡಿಯಲ್ಲಿ ಮನೆಗಳಿಗೆ ಹಾನಿ ಉಂಟಾಗಿದ್ದು , ಕೃಷಿ ಹಾನಿ ಉಂಟಾಗಿದೆ.
ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ , ಸದಸ್ಯ ಜೆ . ಕೃಷ್ಣ ಶರ್ಮ ಹಾಗೂ ಗ್ರಾಮಾಧಿಕಾರಿ ಎಸ್ . ಲೀಲಾ ಮೊದಲಾದವರು ಭೇಟಿ ನೀಡಿದರು.