ಕಾಸರಗೋಡು: ಸ್ನಾನಕ್ಕಿಳಿದ ಸಂದರ್ಭದಲ್ಲಿ ಹೊಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ 11 ವರ್ಷದ ಬಾಲಕನನ್ನು ಎಂಟು ವರ್ಷದ ಬಾಲಕ ರಕ್ಷಿಸಿದ ಘಟನೆ ಅಡೂರು ಸಮೀಪದ ಪಳ್ಳಂಗೋಡು ಎಂಬಲ್ಲಿ ನಡೆದಿದೆ.
ಪಯಸ್ವಿನಿ ಹೊಳೆಯ ಪಳ್ಳಂಗೋಡು ಎಂಬಲ್ಲಿ ಹೊಳೆಗಿಳಿದಿದ್ದ 11 ವರ್ಷದ ಸ್ಥಳೀಯ ಬಾಲಕ ಮೇಲಕ್ಕೆ ಬರಲಾರದೆ ಒದ್ದಾಡುತ್ತಿದ್ದು , ಇದನ್ನು ಗಮನಿಸಿದ ಮುಹಮ್ಮದ್ ಹಿಬಾತುಲ್ಲ ಎಂಬ ಬಾಲಕ ಸಾಹಸಮಯವಾಗಿ ಬಾಲಕನನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾನೆ.
ಪಳ್ಳಂಗೋಡಿನ ಇಬ್ರಾಹಿಂ ಹಸೀಬ್-ಬುಶ್ರಾ ದಂಪತಿಯ ಪುತ್ರನಾಗಿರುವ ಮುಹಮ್ಮದ್ ಹಿಬಾತುಲ್ಲ ಪಳ್ಳಂಗೋಡು ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಬಾಲಕ ಹಿಬಾತುಲ್ಲನ ಸಾಹಸ ಮತ್ತು ಸಮಯಪ್ರಜ್ಞೆಯಿಂದಾಗಿ ಇನ್ನೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಇದಕ್ಕಾಗಿ ಬಾಲಕನಿಗೆ ಸಾರ್ವಜನಿಕರಿಂದ ತೀವ್ರ ಪ್ರಶಂಸೆ ವ್ಯಕ್ತವಾಗಿದೆ.