ಬಂಟ್ವಾಳ : ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಮಂಗಳೂರಿಗೆ ಬರಹೇಳಿ ಅಲ್ಲಿನ ಲಾಡ್ಜ್ ಒಂದರಲ್ಲಿ ಸಂಗಡಿಗರೊಂದಿಗೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು ಅವರೆಲ್ಲರನ್ನೂ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ ಬಂಟ್ವಾಳ ಎಎಸ್ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಅಡಿಷನಲ್ ಎಸ್ಪಿ ಡಾ. ಶಿವಕುಮಾರ್ ಮಾರ್ಗದರ್ಶನದಲ್ಲಿ, ಎಎಸ್ಪಿ ಶಿವಾಂಶು ರಜಪೂತ್ ಅವರ ನೇತೃತ್ವದ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ಬಂಟ್ವಾಳ ಎಸ್ಸೈ ಅವಿನಾಶ್ ಗೌಡ ನೇತೃತ್ವದ ಪೊಲೀಸರ ತಂಡ ಗ್ರಾಮಾಂತರ ಎಸ್ಸೈ ಪ್ರಸನ್ನ ಸಹಕಾರದೊಂದಿಗೆ ಬಾಲಕಿಯ ದೂರಿನ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೇರೆ ಬೇರೆ ಪ್ರದೇಶಗಳಲ್ಲಿದ್ದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಂಗಳೂರಿನಲ್ಲಿ ಈ ಕೃತ್ಯ ನಡೆದದ್ದು ಕಂಡುಬಂದಿರುವುದಾಗಿ ತಿಳಿಸಿದರು. ಆರಂಭದಲ್ಲಿ ತನ್ನನ್ನು ಕಾರಿನಲ್ಲಿ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಬಂಟ್ವಾಳದ ಅಪ್ತಾಪ್ತ ವಯಸ್ಕ ಬಾಲಕಿಯೊಬ್ಬಳು ನೀಡಿದ ದೂರಿನಂತೆ ತನಿಖೆ ನಡೆಸಿದ ವೇಳೆ ಈ ಅಂಶ ಬಯಲಿಗೆ ಬಂತು ಎಂದು ಎಸ್ಪಿ ಹೇಳಿದರು.
ಅವರು, ಶುಕ್ರವಾರ ಬೆಳಗ್ಗೆ ತಾನು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿಳಿ ಕಾರಿನಲ್ಲಿ ಬಂದ ತಂಡವೊಂದು ನನ್ನನ್ನು ಅಪಹರಣ ಮಾಡಿ ಅಜ್ಞಾತ ಸ್ಥಳದಲ್ಲಿ ಅತ್ಯಾಚಾರ ನಡೆಸಿದೆ ಎಂದು ಬಾಲಕಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಳು. ಬಾಲಕಿಯ ದೂರಿನಂತೆ ಪ್ರಕರಣ ದಾಖಲಿಸಿದ ಬಂಟ್ವಾಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ ಎಂದು ಹೇಳಿದರು.
ಇದೇ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಎಸ್ಪಿ, ಘಟನೆಯ ಕುರಿತಾಗಿ ಆರಂಭಿಕ ಆರೋಪದಲ್ಲಿದ್ದಂತೆ ಬಾಲಕಿ ಅಪಹರಣ ಆಗಿಲ್ಲ, ಪರಿಚಿತನಾದ ಶರತ್ ಶೆಟ್ಟಿಯ ಕೋರಿಕೆಯಂತೆ ಬಾಲಕಿ ಮಂಗಳೂರಿಗೆ ಹೋಗಿದ್ದ ಸಂದರ್ಭ ಈ ಅಪರಾಧ ಕೃತ್ಯ ನಡೆದಿದೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಎ.ಎಸ್.ಪಿ.ಶಿವಾಂಶು ರಜಪೂತ್ , ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ , ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಹಾಗೂ ಗ್ರಾಮಾಂತರ ಎಸ್.ಐ.ಪ್ರಸನ್ನ ಉಪಸ್ಥಿತರಿದ್ದರು.
ಬಾಲಕಿ ಪುಸಲಾಯಿಸಿ ಮಂಗಳೂರಿಗೆ ಬರಹೇಳಿ ಲಾಡ್ಜ್ ನಲ್ಲಿ ಸಂಗಡಿಗರೊಂದಿಗೆ ಸಾಮೂಹಿಕ ಅತ್ಯಾಚಾರ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.