ಬಂಟ್ವಾಳ : ಹಿಜಾಬ್ ಪ್ರಕರಣ ದೇಶ ವಿಭಜನೆಯ ಬೀಜಾಂಕುರ ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯಪಟ್ಟಿದ್ದಾರೆ. ಸಜಿಪನಡುವಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ದೇಶವಿಭಜನೆ ನಡೆದ ಘಟನೆ ಒಂದು ದಿನದ ವಿಚಾರವಲ್ಲ, ಅದಕ್ಕೂ ಮೊದಲು ವಂದೇ ಮಾತರಂ ಹಾಡನ್ನು ಕಡಿತಗೊಳಿಸುವ ವಿಚಾರದಿಂದಲೇ ಆರಂಭವಾಯಿತು.
ಹಾಗೆಯೇ ಹಿಜಾಬ್ ಪ್ರಕರಣವೂ ಮುಂದುವರಿದು, ತರಗತಿಯಲ್ಲಿ ನಮಾಜ್ ಮಾಡಲು ಜಾಗ ಕೊಡಿ, ಶುಕ್ರವಾರ ರಜೆ ಕೊಡಿ ಎಂದು ಕೇಳಬಹುದು ಎಂದ ಭಟ್, ಹಿಂದು ಸಮಾಜ ನೇರವಾಗಿ ಏನೂ ಮಾಡುವುದಿಲ್ಲ, ಆದರೆ ಪ್ರತಿಕ್ರಿಯೆ ತೋರುತ್ತಾರೆ, ಹಿಂದು ಸಮಾಜ ಹೆದರಿ ಓಡುವುದಿಲ್ಲ, ಹಿಜಾಬ್ ಯಾಕೆ ಹಾಕಿದ್ದೀರಿ ಎಂದು ಕೇಳಿದ್ದಕ್ಕೆ ಕೇಸರಿ ಶಾಲು ಹಾಕಿ ಬಂದರು. ಇದು ತಪ್ಪಲ್ಲ, ಕೇಸರಿ ಶಾಲು ಹಾಕಿದ ತರುಣರನ್ನು ನಾನು ಅಭಿನಂದಿಸುತ್ತೇನೆ, ಅವರಿಗೆ ಜೈಕಾರ ಹಾಕುವುದಾಗಿ ಭಟ್ ಹೇಳಿದರು.
ಹಿಜಾಬ್ ಕೇಸರಿ ಗೊಂದಲದಿಂದ ಶಾಲೆ ಹಾಳಾಗುತ್ತದೆ ಎನ್ನುತ್ತಾರೆ, ದೇಶದ ಸ್ವಾತಂತ್ರ್ಯ ಹೋರಾಟ ನಡೆದಾಗ, ತುರ್ತು ಪರಿಸ್ಥಿತಿ ಯ ಸಂದರ್ಭದಲ್ಲೂ ಸಾವಿರ ಮಂದಿ ವಿದ್ಯಾರ್ಥಿಗಳೇ ಬೀದಿಗೆ ಬಂದಿದ್ದರು. ಶಾಲೆ ಹೋದರೆ ಹೋಗಲಿ, ಧರ್ಮ, ದೇಶ ಮುಖ್ಯವಾಗಿದ್ದು , ದೇಶ ಇದ್ದರೆ ಶಾಲೆ, ಧರ್ಮ ಇದ್ದರೆ ಶಾಲೆ, ನಮ್ಮ ಸಂಸ್ಕೃತಿ ಉಳಿದರಷ್ಟೇ ಶಾಲೆ ಎಂದು ಭಟ್ ಹೇಳಿದರು.