ಬಂಟ್ವಾಳ: ತಾಲೂಕಿನಾದ್ಯಂತ ಮಂಗಳವಾರ ಮಳೆಯ ಆರ್ಭಟ ಕಡಿಮೆಯಾಗಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿತ್ತು.
ಸೋಮವಾರ ಸಂಜೆಯ ಬಳಿಕದ ಭಾರಿ ಗಾಳಿ ಮಳೆಗೆ ಹಲವಡೆ ಮಳೆಹಾನಿ ಸಂಭವಿಸಿದೆ. ಲೊರೆಟೊ ಸಮೀಪ ಅಮ್ಮಾಡಿ ಗ್ರಾಮದ ಪೆದಮಲೆ ಎಂಬಲ್ಲಿ ರಿಚರ್ಡ್ ಪಿಂಟೊ ಅವರ ಮನೆಯಂಗಳಕ್ಕೆ ನೀರು ಹರಿದು, ತಡೆಗೋಡೆ ಕುಸಿದು ಮನೆಗೆ ಹಾನಿ ಉಂಟಾಗಿದೆ.
ರಸ್ತೆಯ ಬದಿಯಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹರಿದುಬಂತು. ಮನೆಯ ತಡೆಗೋಡೆ ಜರಿದು ಮನೆಯಂಗಳದಲ್ಲಿ ಮಣ್ಣು ಹಾಗೂ ನೀರು ಹರಿದುಹೋಗಿದೆ. ಮಳೆಯ ಬಳಿಕ ಅಂಗಳದಲ್ಲಿ ಮಣ್ಣಿನ ರಾಶಿ ಬಿದ್ದಿದೆ. ಮೆಸ್ಕಾಂ ಕಂಬಗಳು ಹಾಗೂ ಮರ ಕೂಡ ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಅರಳ ಗ್ರಾಮದ ಕಾಜಿಲ ಎಂಬಲ್ಲಿ ಸೆಫಿಯಾ ಎಂಬವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಅಮ್ಹಾಡಿ ಪೆದಮಲೆಯ ವೆಂಕಪ್ಪ ಎಂಬವರ ಮನೆಗೆ ಬರೆ ಜರಿದು ಭಾಗಶಃ ಹಾನಿ ಸಂಭವಿಸಿದೆ. ಬಾರೆಕಾಡು ಎಂಬಲ್ಲಿ ರೆಹಮತ್ ಅವರ ಮನೆ ಸಿಮೆಂಟ್ ಶೀಟ್ ಗಳಿಗೆ ಹಾನಿಯಾಗಿದೆ.