ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದಿದ್ದ ಪ್ರಯಾಣಿಕನೊಬ್ಬ ಶನಿವಾರ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಆತ ಗುದ ನಾಳದಲ್ಲಿ ಚಿನ್ನವನ್ನು ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದುದು ಪತ್ತೆಯಾಗಿದೆ.
ದುಬೈನಿಂದ ಸ್ಪೈಸ್ ಜೆಟ್ ವಿಮಾನ ದಲ್ಲಿ ಬಂದಿಳಿದ ಭಟ್ಕಳ ಮೂಲದ ಪ್ರಯಾಣಿಕನನ್ನ ತೀವ್ರವಾಗಿ ತಪಾಸಣೆ ನಡೆಸಿದ ಅಧಿಕಾರಿಗಳು, ಗುದನಾಳದಲ್ಲಿ 3 ಅಂಡಾಕಾರದ ಪ್ಯಾಕೆಟ್‌ಗಳಲ್ಲಿ ಘನ ಗಮ್‌ನೊಂದಿಗೆ ಬೆರೆಸಿದ ಪೇಸ್ಟ್ ರೂಪದಲ್ಲಿ ಪ್ಯಾಕ್ ಮಾಡಿಟ್ಟಿದ್ದ ಸುಮಾರು 560 ಗ್ರಾಂ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಚಿನ್ನದ ಮಾರುಕಟ್ಟೆ ಮೌಲ್ಯ ಸುಮಾರು 29.12 ಲಕ್ಷ ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.