ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಯೋಗ ಮತ್ತು ಶಾಂತಿವನ ಟ್ರಸ್ಟ್ ವತಿಯಿಂದ ಧರ್ಮಸ್ಥಳದಲ್ಲಿ ಜೂ. 21 ರಂದು 8 ನೇ ವಿಶ್ವ ಯೋಗ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಗುತ್ತದೆ.
ದ.ಕ.,ಉಡುಪಿ, ಚಿಕಮಗಳೂರು, ಉತ್ತರ ಕನ್ನಡ, ಹಾಸನ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಹಾಗೂ ಧಾರವಾಡ ಸೇರಿದಂತೆ ಒಟ್ಟು 4,164 ಶಿಕ್ಷಕರಿಗೆ ಯೋಗ ತರಬೇತಿ ನೀಡಲಾಗಿದೆ. ಪ್ರತಿ ವರ್ಷ 4 ಲಕ್ಷ ವಿದ್ಯಾರ್ಥಿಗಳು ಯೋಗಾಸನಗಳ ಅಭ್ಯಾಸ ಮಾಡುತ್ತಿದ್ದಾರೆ.
2014 ರಲ್ಲಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳ 47 ಕೇಂದ್ರಗಳಲ್ಲಿ 62,827 ವಿದ್ಯಾರ್ಥಿಗಳು ಏಕಕಾಲದಲ್ಲಿ ನಡೆಸಿದ ಯೋಗ ಪ್ರಾತ್ಯಕ್ಷಿಕೆ ವಿಶ್ವ ದಾಖಲೆಗೆ ಭಾಜನವಾಗಿದ್ದು ಇದೀಗ 8 ನೇ ವರ್ಷದ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಿಂದ ತರಬೇತಿ ಪಡೆದ ಯೋಗ ಶಿಕ್ಷಕರು ಅವರವರ ಶಾಲೆ ಹಾಗೂ ಸಾರ್ವಜನಿಕರಿಗೆ ಯೋಗ ತರಬೇತಿಯನ್ನು ನೀಡುತ್ತಿದ್ದು ಜೂ. 21 ರಂದು ಬೆಳಿಗ್ಗೆ 7 ಗಂಟೆಗೆ ಏಕಕಾಲದಲ್ಲಿ ಸಾಮೂಹಿಕ ಯೋಗಾಸನಗಳ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಬೆಂಗಳೂರಿನ ಪ್ರಜ್ವಲ್ ಎಂ.ನಾಯಕ್ ಅವರಿಗೆ ಡಾl ಹೆಗ್ಗಡೆ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಯೋಗ ರತ್ನ ಪ್ರಶಸ್ತಿ- 2022 ನ್ನು ನೀಡಿ ಗೌರವಿಸಲಾಗುವುದು ಎಂದು ಯೋಜನೆಯ ನಿರ್ದೇಶಕ ಡಾ. ಶಶಿಕಾಂತ ಜೈನ್ ಮತ್ತು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.