ಬೆಳ್ತಂಗಡಿ : ‘ಬೆಳ್ತಂಗಡಿ ರೋಟರಿ ಕ್ಲಬ್ ನ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.7 ರಂದು ಕಾಶಿಬೆಟ್ಟು ಅರಳಿ ರಸ್ತೆಯಲ್ಲಿರುವ ರೋಟರಿ ಸೇವಾ ಭವನದಲ್ಲಿ ನಡೆಯಲಿದೆ’ ಎಂದು ನೂತನ ಅಧ್ಯಕ್ಷೆ ಮನೋರಮಾ ಭಟ್ ಹೇಳಿದರು.
ಅವರು ಮಂಗಳವಾರ ರೋಟರಿ ಸೇವಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 318 ರ 2023-24 ನೇ ಸಾಲಿನ ಚುನಾಯಿತ ಗವರ್ನರ್ ಮೈಸೂರಿನ ಉದ್ಯಮಿ ಎಚ್.ಆರ್.ಕೇಶವ್ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ. ವಲಯ 4 ರ ಸಹಾಯಕ ಗವರ್ನರ್ ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್ ಹಾಗೂ ಝೋನಲ್ ಲೆಫ್ಟಿನೆಂಟ್ ಶರತ್ ಕೃಷ್ಣ ಪಡ್ವೆಟ್ನಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದರು.
‘ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಧ್ಯೆಯವಾಕ್ಯ ಇಮಾಜಿನ್ ರೋಟರಿ ಇದರಂತೆ ಪ್ರಸ್ತುತ ವರ್ಷದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳು, ಮಕ್ಕಳ ಅಪೌಷ್ಟಿಕತೆ ನಿವಾರಣೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಮಾಹಿತಿ ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನ, ಮೂಲ ಸೌಕರ್ಯಗಳ ಒದಗಣೆ, ಪರಿಸರ ಸಂರಕ್ಷಣೆ ಕಾರ್ಯಕ್ರಮ, ಬೆಂಗಳೂರಿನ ಇಂದಿರಾನಗರ ರೋಟರಿ ಕ್ಲಬ್ ಸಹಯೋಗದಲ್ಲಿ ನಡ ಸರ್ಕಾರಿ ಪ್ರೌಢಶಾಲೆಗೆ ರೂ.20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ’ ಎಂದರು.
ರೋಟರಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ ಮಾತನಾಡಿ, ‘ಬೆಳ್ತಂಗಡಿ ರೋಟರಿ ಕ್ಲಬ್ ಮೂಲಕ 2021-22 ನೇ ಅವಧಿಯಲ್ಲಿ ಸುಮಾರು 750 ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನೂತನ ಅಧ್ಯಕ್ಷೆ ಮನೋರಮಾ ಭಟ್ ಕ್ಲಬ್ ಗೆ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದಾರೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸಹಾಯಕ ಗವರ್ನರ್ ನಿವೃತ್ತ ಮೇಜರ್ ಜನರಲ್ ಎಂ.ವಿ.ಭಟ್, ಮಾಜಿ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ಕಾರ್ಯದರ್ಶಿ ಅಬೂಬಕ್ಕರ್, ನಿಯೋಜಿತ ಕಾರ್ಯದರ್ಶಿ ರಕ್ಷಾ ರಾಘ್ನೇಶ್, ಕೋಶಾಧಿಕಾರಿ ನಾರಾಯಣ ಪೈ, ನಿರ್ದೇಶಕರುಗಳಾದ ಉಮಾ ಆರ್ ರಾವ್, ಪ್ರಕಾಶ್ ನಾರಾಯಣ್, ಡಾ. ಆಂಟನಿ ಟಿ. ಪಿ., ಸಂದೇಶ್ ರಾವ್, ಶ್ರವಣ್ ಇದ್ದರು.