News Kannada
Tuesday, October 03 2023
ಮಂಗಳೂರು

ಮಂಗಳೂರು: ಕೊಲೆಗೀಡಾದ ಮೂರೂ ಕುಟುಂಬಗಳಿಗೆ ಸಮಾನ ಪರಿಹಾರ ವಿತರಣೆಗೆ ಎಡ ,ಜಾತ್ಯಾತೀತ ಪಕ್ಷ ಆಗ್ರಹ

Left and Secular party demand equal compensation to the families of the three deceased.
Photo Credit : News Kannada

ಮಂಗಳೂರು: ದಕ್ಷಿಣ ಕ‌ನ್ನಡ ಜಿಲ್ಲೆಯ ಬೆಳ್ಳಾರೆ, ಸುರತ್ಕಲ್ ನಲ್ಲಿ ಕೋಮುದ್ವೇಷದ ಹಿನ್ನಲೆಯಲ್ಲಿ ನಡೆದಿರುವ ಮೂರು ಕೊಲೆಗಳ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಎಡ ಹಾಗೂ ಜಾತ್ಯಾತೀತ ಪಕ್ಷ, ಸಂಘಟ‌ನೆಗಳು ಆತಂಕವನ್ನು ವ್ಯಕ್ತ ಪಡಿಸಿವೆ.

ಈ ಕೊಲೆಗಳು ಜನರನ್ನು ಧರ್ಮಾಧಾರಿತವಾಗಿ ವಿಭಜಿಸಿ ರಾಜಕೀಯ ನಡೆಸುವ ಆಡಳಿತ ಪಕ್ಷ ಬಿಜೆಪಿ ಹಾಗೂ ಪರಿವಾರದ ಕೋಮುವಾದಿ ನೀತಿಯ ಫಲ. ರಾಜ್ಯ ಸರಕಾರದ ವೈಫಲ್ಯ ಹಾಗೂ ಪ್ರಚೋದನೆಗಳೇ ಸರಣಿ ಕೊಲೆ ಹಾಗೂ ನಂತರದ ಬೆಳವಣಿಗೆಗಳಿಗೆ ನೇರ ಕಾರಣ. ಮುಖ್ಯ ಮಂತ್ರಿ ಬೊಮ್ಮಾಯಿ ಸಹಿತ ಬಿಜೆಪಿ ಜನಪ್ರತಿನಿಧಿಗಳು ಮತೀಯ ದ್ವೇಷದ ಕೊಲೆಗಳಿಗೆ ಸಂಬಂಧಿಸಿ ತನಿಖೆ, ಸಾಂತ್ವನ ಹಾಗೂ ಪರಿಹಾರ ವಿತರಣೆ ಸಂದರ್ಭ ಧರ್ಮಾಧಾರಿತ ತಾರತಮ್ಯ ಎಸಗಿರುವುದು ಖಂಡನಾರ್ಹ.

ಕೊಲೆಗೀಡಾದ ಮೂರೂ ಕುಟುಂಬಗಳಿಗೆ ಸಮಾನ ಪರಿಹಾರ ವಿತರಣೆ, ತನಿಖೆಗೆ ವಿಶೇಷ ತನಿಖಾ ತಂಡದ ರಚಿಸುವ ಮೂಲಕ ನ್ಯಾಯ ಪಾಲಿಸುವಂತೆ ಮಂಗಳೂರಿನ ವಿಕಾಸ ಕಚೇರಿಯಲ್ಲಿ ಕರೆದ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿವೆ‌.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಧರ್ಮಾಧಾರಿತ ಕೊಲೆಗಳು ನಡೆಯುವುದು ಸಂಪ್ರದಾಯ ಎಂಬಂತಾಗಿದೆ. ಈ ಬಾರಿಯು ಜನಸಾಮಾನ್ಯರಿಗೆ ಕೊಲೆಗಳು ನಡೆಯುವ ಕುರಿತು ಆತಂಕ ಇತ್ತು. ಅದೀಗ ನಿಜವಾಗಿದೆ. ಕೋಮು ವೈಷಮ್ಯದ ಹಿಂಸೆ, ಕೊಲೆಗಳು ನಡೆದಾಗ ಸರಕಾರ ನ್ಯೂಟ್ರಲ್ ಆಗಿ ಕ್ರಮಗಳನ್ನು ಜರುಗಿಸಬೇಕು.‌ ಒಂದು ಕಡೆಗೆ ವಾಲಬಾರದು. ಆದರೆ ಮುಖ್ಯಮಂತ್ರಿ ಸಹಿತ ಬಿಜೆಪಿ ಸರಕಾರ ಹಾಗೂ ಅದರ ಜನಪ್ರತಿನಿಧಿಗಳು ತಮ್ಮ ರಾಜಕೀಯ ಅಜೆಂಡಾದಂತೆ ಬಹು ಸಂಖ್ಯಾತ ಕೋಮುವಾದದ ಪರ ನಿಂತು ಕ್ರಮಗಳನ್ನು ಜರುಗಿಸಿರುವುದು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ನಿರ್ಲಜ್ಜ ಅಧ್ಯಾಯ.

ಸಂತ್ರಸ್ತ ಕುಟುಂಬಗಳ ಭೇಟಿ, ಪರಿಹಾರ ಧನ ವಿತರಣೆಯಲ್ಲಿ ಕೊಲೆಗೀಡಾದ ಮುಸ್ಲಿಂ ಯುವಕರ ಕುಟುಂಬಗಳನ್ನು ಕಡೆಗಣಿಸಿರುವುದು ಚುನಾವಣಾ ಲಾಭದ ಉದ್ದೇಶದಿಂದ ಧರ್ಮಾಧಾರಿತವಾಗಿ ಮತಗಳ ಧ್ರುವೀಕರಣಕ್ಕೆ ನಡೆಸಿರುವ ನಿರ್ಲಜ್ಜ ತಂತ್ರ. ಸಾಮಾಜಿಕವಾಗಿ ಇದು ಗಂಭೀರ ಪರಿಣಾಮಗಳಿಗೆ ಎಡೆಮಾಡಲಿದೆ. ಮುಖ್ಯಮಂತ್ರಿ, ಸ್ಥಳೀಯ ಶಾಸಕರು, ಸಂಸದರುಗಳು ಈಗಲಾದರು ತಮ್ಮ ತಪ್ಪುಗಳನ್ನು ಅರಿತು ಸಂತ್ರಸ್ತ ಮುಸ್ಲಿಂ ಕುಟುಂಬಗಳನ್ನು ಭೇಟಿಯಾಗಬೇಕು. ಪರಿಹಾರ ಧನವನ್ನು ವಿತರಿಸಬೇಕು ಹಾಗೂ ಮೂರೂ ಕೊಲೆಗಳ ತನಿಖೆಗೆ ಹಿರಿಯ ಅಧಿಕಾರಿಗಳ ನೇತೃತ್ವದದ ವಿಶೇಷ ತನಿಖಾ ತಂಡ ನೇಮಿಸಬೇಕು ಎಂದು ಆಗ್ರಹಿಸಿವೆ. ಪ್ರವೀಣ್ ನೆಟ್ಯಾರು ಅಂತಿಮ ದರ್ಶನದ ಸಂದರ್ಭ ಹಾಗೂ ನಂತರ ಬೆಳ್ಳಾರೆ, ಗುತ್ತಿಗಾರು ಮೊದಲಾದೆಡೆ ಹಿಂಸಾಚಾರ ನಡೆಸಿ ಅಲ್ಪಸಂಖ್ಯಾತ ಸಮುದಾಯದವರ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದವರ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಪ್ರವೀಣ್ ನೆಟ್ಯಾರು ಅಂತಿಮ ದರ್ಶನದ ಸಂದರ್ಭ ಜನತೆ ವ್ಯಕ್ತಪಡಿಸಿದ ವ್ಯಾಪಕ ಆಕ್ರೋಶ ಬಿಜೆಪಿ ಆಡಳಿತ ಹಾಗೂ ಸಂಘ ಪರಿವಾರದ ಕೋಮು ಹಿಂಸೆಯ ಕುರಿತು ಜನ ಸಾಮಾನ್ಯರಲ್ಲಿ ಮುಡಗಟ್ಟಿರುವ ಆಕ್ರೋಶದ ಅಭಿವ್ಯಕ್ತಿ. ಆದರೆ ಸಂಘ ಪರಿವಾರ ಜನತೆಯ ಆಕ್ರೋಶವನ್ನು ಬಿಜೆಪಿಯ ಆಂತರಿಕ ಸಮಸ್ಯೆ ಹಾಗೂ ಮತ್ತಷ್ಟು ತೀವ್ರ ಮುಸ್ಲಿಂ ದ್ವೇಷದ ಕಡೆಗೆ ತಿರುಗಿಸಲು ಯತ್ನಿಸುತ್ತಿದೆ.

See also  ಬುರ್ಕಾ ಬಟನ್ ಒಳಗಡೆ ಚಿನ್ನ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಶಕ್ಕೆ

ಅದರ ಭಾಗವಾಗಿಯೇ ಎನ್ಕೌಂಟರ್, ಯುಪಿ ಮಾದರಿ, ಬುಲ್ಡೋಜರ್ ಬಳಕೆಯ ಮಾತುಗಳನ್ನು ತೇಲಿ ಬಿಡಲಾಗುತ್ತಿದೆ. ಇದು ತೀರಾ ಖಂಡನೀಯ ನಡೆ. ಜನತೆ ಇಂತಹ ಹಿಂಸಾತ್ಮಕ ರಾಜಕಾರಣದ ಆಳ ಅಗಲಗಳನ್ನು ಅರ್ಥ ಮಾಡಿಕೊಳ್ಳಬೇಕು. ಈಗಾಗಲೆ ಆರ್ಥಿಕ ಹಿ‌ನ್ನಡೆಗಳು, ಕೊರೋನಾ ಸಂದರ್ಭದ ತಪ್ಪಾದ ನಿರ್ವಹಣೆಗಳು ಜನಸಾಮಾನ್ಯರ ಬದುಕನ್ನು ಹೈರಾಣಗೊಳಿಸಿದೆ. ಈಗ ನಿಷೇಧಾಜ್ಞೆ, ಸಾಯಂಕಾಲದ ನಂತರ ವ್ಯಾಪಾರ ವಹಿವಾಟು, ದುಡಿಮೆಗಳ ಮೇಲಿನ ನಿರ್ಬಂಧ ದಿನ ನಿತ್ಯದ ಬದುಕಿನ ಮೇಲೆ ಗದಾ ಪ್ರಹಾರ ಮಾಡುತ್ತಿದೆ.

ರಾಜಕೀಯ ಪ್ರೇರಿತವಾದ ಮತೀಯ ದ್ವೇಷಕ್ಕೆ ತಡೆ ಹಾಕದಿದ್ದಲ್ಲಿ ನಿರುದ್ಯೋಗ, ಬಡತನದ ತೀವ್ರತೆ ಮತ್ತಷ್ಟು ಹೆಚ್ಚಳಗೊಳ್ಳಲಿದೆ. ಕೋಮುವಾದದ ರಾಜಕಾರಣವನ್ನು ತಿರಸ್ಕರಿಸಿ, ಹಿಂದು ಮುಸ್ಲಿಂ ಐಕ್ಯತೆಯನ್ನು ಎತ್ತಿ ಹಿಡಿಯುವ ಮೂಲಕ ಜಿಲ್ಲೆಯ ಜನತೆ ಪ್ರಜ್ಞಾವಂತಿಕೆ ಮೆರೆಯಬೇಕು‌ ಎಂದು ಎಡ ಹಾಗೂ ಜಾತ್ಯಾತೀತ ಪಕ್ಷ, ಸಂಘಟನೆಗಳ ಮುಖಂಡರು ಜಂಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಯಾದವ ಶೆಟ್ಟಿ (ಕಾರ್ಯದರ್ಶಿ, ಸಿಪಿಐಎಂ ದಕ್ಷಿಣ ಕನ್ನಡ),ವಿ ಕುಕ್ಯಾನ್ (ಕಾರ್ಯದರ್ಶಿ, ಸಿಪಿಐ ದಕ್ಷಿಣ ಕನ್ನಡ ಜಿಲ್ಲೆ), ಮುನೀರ್ ಕಾಟಿಪಳ್ಳ (ರಾಜ್ಯ ಅಧ್ಯಕ್ಷರು, ಡಿವೈಎಫ್ಐ ಕರ್ನಾಟಕ), ಯಶವಂತ ಮರೋಳಿ ( ಜಿಲ್ಲಾ ಅಧ್ಯಕ್ಷರು, ಅಖಿಲ ಭಾರತ ವಕೀಲರ ಸಂಘ), ದಿನೇಶ್ ಹೆಗ್ಡೆ ಉಳೇಪಾಡಿ (ಖ್ಯಾತ ವಕೀಲರು), ಎಚ್ ವಿ ರಾವ್ (ಎಐಟಿಯುಸಿ ಜಿಲ್ಲಾ ಅಧ್ಯಕ್ಷರು), ಸು‌ನಿಲ್ ಕುಮಾರ್ ಬಜಾಲ್ (ಸಿಐಟಿಯು ದ‌.ಕ. ಜಿಲ್ಲಾ ಕಾರ್ಯದರ್ಶಿ), ಬೊಂಡಾಲ ಚಿತ್ತರಂಜನ್ ಶೆಟ್ಟಿ (ಇಂಟಕ್ ದ‌.ಕ‌. ಜಿಲ್ಲಾ ಕಾರ್ಯದರ್ಶಿ), ಕರುಣಾಕರ ಮಾರಿಪಳ್ಳ (ಎಐವೈಎಫ್ ದ.ಕ. ಜಿಲ್ಲಾ ಉಪಾಧ್ಯಕ್ಷರು), ಸಂತೋಷ್ ಬಜಾಲ್ (ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ) ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು