ಮಂಗಳೂರು, ಆ.31: ಸೆ.೨ ರಂದು ದೇಶದ ಪ್ರಧಾನಿ ಮಂಗಳೂರಿಗೆ ಬರುದು ಸಂತಸದ ವಿಚಾರ. ಅವರನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೆಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಳ್ಳಲಿದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಪಾಲೆಷ್ಟು ಎಂದು ರಾಜ್ಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿಯ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ತುಂಬಾ ಸಂತೋಷ. ಆದರೆ, ಈ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನ ಎಷ್ಟೆಷ್ಟಿದೆ ಎಂಬುದು ಸಾರ್ವಜನಿ ಕರಿಗೆ ತಿಳಿಯಬೇಕಾಗಿದೆ. ಅಲ್ಲದೆ ಯೋಜನೆಗಳಲ್ಲಿ ಖಾಸಗಿ ಕಂಪೆನಿಗಳ ಮೊತ್ತಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳ ಪಟ್ಟಿಯೇ ಇದೆ. ಮುಖ್ಯವಾಗಿ ತುಳು ಭಾಷೆಯನ್ನು ೮ನೆ ಪರಿಚ್ಛೇಧಕ್ಕೆ ಸೇರಿಸಬೇಕು, ತುಳುವನ್ನು ರಾಜ್ಯಭಾಷೆ ಎಂದು ಘೋಷಿಸಬೇಕು. ಹೆದ್ದಾರಿಯ ಅನಧಿಕೃತ ಟೋಲ್‌ಗೇಟ್ ತೆರವುಗೊಳಿಸಬೇಕು. ಎಂಆರ್‌ಪಿಎಲ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯರ ಹೆಸರಿಡುವ ವಿಚಾರ , ರೈಲ್ವೆ, ಬ್ಯಾಂಕಿಂಗ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು.
2018ರ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಬೇಕು. ಇಂತಹ ಬೇಡಿಕೆಗಳನ್ನು ಪ್ರಧಾನಿಯ ಮುಂದಿಡುವ ಕೆಲಸವನ್ನು ಸಂಸದರು, ಶಾಸಕರು ಮಾಡಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು.