ಬಂಟ್ವಾಳ: ತಮ್ಮನೇ ಅಣ್ಣನನ್ನು ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ಬನಾರಿ ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ನಿವಾಸಿ ಗಣೇಶ್ ಬಂಗೇರ (54) ಕೊಲೆಯಾದವರು. ಅವರ ತಮ್ಮ ಪದ್ಮನಾಭ ಬಂಗೇರ (49) ಕೊಲೆ ಆರೋಪಿಯಾಗಿದ್ದಾನೆ. ಮಂಗಳವಾರ ರಾತ್ರಿ 8ಗಂಟೆಯಿಂದ ಬುಧವಾರ ಬೆಳಗ್ಗೆ 9.30ರ ಮಧ್ಯೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪದ್ಮನಾಭ ಬಂಗೇರ, ಗಣೇಶ್ ಬಂಗೇರ ಅವರ ತಲೆ, ಎದೆ ಮತ್ತು ಮುಖಕ್ಕೆ ಯಾವುದೋ ಆಯುಧದಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತ ದೇಹದ ಬಟ್ಟೆಗಳನ್ನು ಮತ್ತು ಮೃತ ದೇಹವನ್ನು ಸ್ವಚ್ಛಗೊಳಿಸಿ ಗಣೇಶ್ ಅವರು ಮಲಗುವ ಕೋಣೆಯ ಮಂಚದ ಮೇಲೆ ಮಲಗಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆಯೂ ಪದ್ಮನಾಭ ಬಂಗೇರ ತನ್ನ ಅಣ್ಣ ಗಣೇಶ್ ಬಂಗೇರ ಅವರಿಗೆ ಯಾವುದೋ ದ್ವೇಷದಿಂದ ಹಲ್ಲೆ ನೆಡೆಸಿದ್ದು ಅವರು ಎರಡು ಬಾರಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗಣೇಶ್ ಬಂಗೇರ ಮತ್ತು ಪದ್ಮನಾಭ ಬಂಗೇರ ತಮ್ಮ ತಾಯಿಯ ಜೊತೆ ಮನೆಯಲ್ಲಿ ವಾಸವಿದ್ದರು.
ಪ್ರಸಾದ್ ಕುಮಾರ್ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಾಲಂ 302, 201 ಅಡಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಎಎಸ್ಪಿ ಕುಮಾರ್ ಚಂದ್ರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.