ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ಕರಾವಳಿ ಕೇಸರಿ ನ್ಯೂಸ್ ಪ್ರಸ್ತುತ ಪಡಿಸುವ “ಯಕ್ಷ ಕೇಸರಿ 2022“ ಕಾರ್ಯಕ್ರಮ ಉರ್ವಸ್ಟೋರ್‌ನ ತುಳುಭವನದಲ್ಲಿ ಅಕ್ಟೋಬರ್ 15 ರಂದು ನಡೆಯಲಿದೆ.
ಈ ಸಂದರ್ಭ ಪ್ರಶಸ್ತಿ ಪ್ರದಾನ, ಕರಾವಳಿ ಕೇಸರಿ ನ್ಯೂಸ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ, ಪ್ರಸಿದ್ಧ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಮತ್ತು ಪ್ರಸಾದ್ ನೇತ್ರಾಲಯದ ಸಹಕಾರದೊಂದಿಗೆ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಹಾಗೂ ಅಗರಿ ರಘುರಾಮ ಭಾಗವತರ ವೇದಿಕೆಯಲ್ಲಿ “ಕಾರ್ನಿಕದ ಕೊರಗಜ್ಜೆ” ಎಂಬ ತುಳು ಯಕ್ಷಗಾನ ನಡೆಯಲಿದೆ.
ಈ ಕಾರ್ಯಕ್ರಮವನ್ನು ಅಗರಿ ಶ್ರೀ ರಾಘವೇಂದ್ರ ರಾವ್ ಉದ್ಘಾಟಿಸಲಿದ್ದು, ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೃಷ್ಣಮೂರ್ತಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಆಶೀರ್ವಚನ ನೀಡಲಿದ್ದು, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಶುಭಾಶಂಸನೆಗೈಯಲಿದ್ದಾರೆ.
ಶಾಸಕರಾದ ಗೌರವಾನ್ವಿತ ಡಾ| ಭರತ್ ವೈ ಶೆಟ್ಟಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು ತುಳು ಕೂಟ ಮಸ್ಕತ್‌ನ ಮಾಜಿ ಅಧ್ಯಕ್ಷ ದಯಾನಂದ ರಾವ್ ಕಾವೂರು ಧನಸಹಾಯ ವಿತರಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಉರ್ವ ಪೋಲೀಸ್ ಠಾಣೆಯ ಪೋಲೀಸ್ ನಿರೀಕ್ಷಕರಾದ ಭಾರತಿ ಜಿ., ಮಾಂಡೋವಿ ಮೋಟರ್ಸ್ನ ಶಶಿಧರ ಟಿ ಕಾರಂತ್, ಯಕ್ಷಗಾನ ಪ್ರಸಂಗಕರ್ತ ಜಿ.ಕೆ. ಶ್ರೀನಿವಾಸ್ ಸಾಲ್ಯಾನ್, ತುಳು ಅಕಾಡೆಮಿ ರಿಜಿಸ್ಟ್ರಾರ್ ಕವಿತಾ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಪತ್ರಕರ್ತ, ತುಳು ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು ಮತ್ತು ಯಕ್ಷಗಾನ ಕಲಾವಿದೆ ಪೂರ್ಣಿಮಾ ಶಾಸ್ತ್ರಿ ನಿರೂಪಿಸಲಿದ್ದು “ಯಕ್ಷ ಕೇಸರಿ- 2022” ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ದಿನೇಶ್ ಅಮ್ಮಣ್ಣಾಯರಿಗೆ ಹಾಗೂ “ಕಲಾ ಕೇಸರಿ-2022” ಪ್ರಶಸ್ತಿಯನ್ನು ಚಲನಚಿತ್ರ ನಟ ನವೀನ್ ಡಿ. ಪಡೀಲ್ ರವರಿಗೆ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಸಂಯೋಜಕ, ಕರಾವಳಿ ಕೇಸರಿ ನ್ಯೂಸ್ ಪತ್ರಿಕೆಯ ಸಂಪಾದಕ ರಜನ್ ಕುಮಾರ್ ಕೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.