ಬೆಳ್ತಂಗಡಿ: ಕಾಡಾನೆ ಹಾವಳಿ ಪ್ರದೇಶಗಳಾದ ಬೆಳ್ತಂಗಡಿ ತಾಲೂಕಿನ ನೆರಿಯ, ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಿಗೆ ಅರಣ್ಯ ಇಲಾಖೆಯ ಎಸಿಎಫ್ ಸುಬ್ರಹ್ಮಣ್ಯ ರಾವ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನೆಗಳನ್ನು ಕಾಡಿಗಟ್ಟುವ ತಂಡಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಹೆಚ್ಚಿನ ಸಲಹೆ ಸೂಚನೆಗಳನ್ನು ನೀಡಿದರು.
ಬೆಳ್ತಂಗಡಿ ಆರ್ ಎಫ್ ಒ ತ್ಯಾಗರಾಜ್, ಉಪವಲಯ ಅರಣ್ಯಾಧಿಕಾರಿ ಭವಾನಿ ಶಂಕರ, ಗಸ್ತು ಅರಣ್ಯ ಪಾಲಕ ಪಾಂಡುರಂಗ ಕಮತಿ, ವಾಸಣ್ಣ ಹಾಗೂ ಸ್ಥಳೀಯರು ಇದ್ದರು.
ತೋಟತ್ತಾಡಿಯಲ್ಲಿ ಸೋಮವಾರ ರಾತ್ರಿಯೂ ಕಾರ್ಯಾಚರಣೆ ವೇಳೆ ಮತ್ತೆ ಒಂಟಿ ಸಲಗ ತಂಡಕ್ಕೆ ಕಂಡುಬಂದಿದೆ. ಇದರಿಂದ ನೆರಿಯ ಅಣಿಯೂರಿನಲ್ಲಿ ಸೋಮವಾರ ಬೆಳಿಗ್ಗೆ ಕಂಡು ಬಂದ ಒಂಟಿ ಸಲಗ, ಇಲ್ಲಿ ತಿರುಗಾಟ ನಡೆಸುವ ಒಂಟಿ ಸಲಗ ಬೇರೆ ಬೇರೆ ಎಂಬ ಅನುಮಾನ ವ್ಯಕ್ತವಾಗಿದೆ.
ಭಾನುವಾರ ನೆರಿಯದ ರಾಮಕುಮಾರ್ ಎಂಬವರ ತೋಟಕ್ಕೆ ದಾಳಿ ನಡೆಸಿರುವ ಒಂಟಿ ಸಲಗ ಅಡಕೆ ಗಿಡಗಳಿಗೆ ಹಾನಿ ಉಂಟು ಮಾಡಿದೆ. ಕಡಿರುದ್ಯಾವರ ಗ್ರಾಮದ ಭಂಡಾಜೆ ಎಂಬಲ್ಲಿ ಕೃಷಿ ತೋಟಕ್ಕೆ ಸೋಮವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು ಬಾಳೆ ಕೃಷಿಯನ್ನು ಪುಡಿಗೈದಿವೆ. ಇದರಿಂದ ಈ ಗ್ರಾಮಗಳಲ್ಲಿ ಬೇರೆ ಬೇರೆ ಹಿಂಡುಗಳಲ್ಲಿ ಕಾಡಾನೆಗಳು ಇರುವುದು ಸ್ಪಷ್ಟವಾಗಿದೆ.
ನಾಗರಹೊಳೆಯಿಂದ ತಂಡ
ಇಲ್ಲಿನ ಪರಿಸರಗಳಲ್ಲಿ ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ನಾಗರಹೊಳೆಯಿಂದ ನುರಿತ ಕಾವಾಡಿಗರನ್ನು ತರಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕುರಿತು ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಸಂಬಂಧಪಟ್ಟವರಲ್ಲಿ ಮಾತುಕತೆ ನಡೆಸಿದ್ದು ಮುಂದಿನ ಒಂದೆರಡು ದಿನದಲ್ಲಿ ತಂಡ ಆಗಮಿಸುವ ನಿರೀಕ್ಷೆ ಇದೆ ಎಂದು ಡಿಎಫ್ ಒ ಡಾ.ದಿನೇಶ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಮುಂಡಾಜೆಯ ದುಂಬೆಟ್ಟು ಪ್ರದೇಶಕ್ಕೂ ನಾಗರಹೊಳೆಯಿಂದ ಕಾವಾಡಿಗರು ಆಗಮಿಸಿದ್ದು ಸಾಕಷ್ಟು ಪರಿಶೀಲನೆಗಳು ನಡೆದಿದ್ದವು.ಆದರೆ ಆ ಸಮಯ ಕಾಡಾನೆಗಳು ಕಂಡು ಬರದೆ ತಂಡ ಹಿಂದಿರುಗಿತ್ತು. ತಂಡ ವಾಪಸಾದ ಒಂದೆರಡು ದಿನಗಳ ಬಳಿಕ ಮತ್ತೆ ಕಾಡಾನೆಗಳ ಕಾಟ ಆರಂಭವಾಗಿತ್ತು.