ಮಲವಂತಿಗೆ: ದ.ಕ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಹತ್ತಿರದ ಸಂಪರ್ಕವಾದ ದಿಡುಪೆ- ಎಳನೀರು ರಸ್ತೆ ನಿರ್ಮಾಣಕ್ಕೆ ಮುಂದಿನ ಒಂದು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದಕ ಜಿಲ್ಲಾಧಿಕಾರಿ ರಮೇಶ್ ಕುಮಾರ್ ಎಂ.ಆರ್. ಹೇಳಿದರು.
ಅವರು ಶನಿವಾರ ಮಲವಂತಿಗೆಯ ಕಜಕ್ಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ ಶಾಸಕ ಹರೀಶ್ ಪೂಂಜ ಅವರೊಡನೆ ಮಾತುಕತೆ ನಡೆಸಿದ್ದು ರಾಜ್ಯಮಟ್ಟದಿಂದ ಅನುಮತಿ ದೊರೆಯಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಜತೆ ಶೀಘ್ರ ಚರ್ಚೆ ನಡೆಸಿ ರಸ್ತೆ ನಿರ್ಮಾಣದ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಎಳನೀರು ಹಾಗೂ ಮಲವಂತಿಗೆ ಗ್ರಾಮದ ಹಲವರು ಸ್ವ-ಇಚ್ಛೆಯಿಂದ ತಮ್ಮ ಜಾಗವನ್ನು ಸರಕಾರಕ್ಕೆ ಬಿಟ್ಟು ಕೊಡುವ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು 5 ವರ್ಷದಿಂದ ನೆನೆಗುದಿಗೆ ಬಿದ್ದಿವೆ ಎಂದು ಗ್ರಾಮಸ್ಥರು ಹೇಳಿದರು.
ಈ ಬಗ್ಗೆ ಕೂಡಲೇ ದಾಖಲೆಗಳನ್ನು ಪರಿಶೀಲಿಸಿ, ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲು ವನ್ಯಜೀವಿ ವಿಭಾಗಕ್ಕೆ ಡಿಸಿ ಆದೇಶಿಸಿದರು.
ಮಲವಂತಿಗೆ ಗ್ರಾಮದಲ್ಲಿ ಹಲವಾರು ಜಲಪಾತ ಜನಾಕರ್ಷಕ ಪ್ರೇಕ್ಷಣೀಯ ಸ್ಥಳಗಳಿದ್ದು ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇದರ ಎಲ್ಲಾ ಆದಾಯ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಸೇರುತ್ತಿದ್ದು ಪಂಚಾಯಿತಿಗೆ ಯಾವುದೇ ಆದಾಯ ಬರುತ್ತಿಲ್ಲ ಎಂಬ ವಿಚಾರ ಡಿಸಿ ಅವರ ಗಮನಕ್ಕೆ ತರಲಾಯಿತು.
ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಸೇರಿ ಸಮಿತಿಯೊಂದನ್ನು ರಚಿಸಿ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಿಂದ ಬರುವ ಆದಾಯವನ್ನು ವನ್ಯಜೀವಿ ವಿಭಾಗ ಮತ್ತು ಪಂಚಾಯಿತಿ 50:50 ಹಂಚಿಕೊಳ್ಳಬೇಕು ಎಂದು ತಿಳಿಸಿದರು.
2019ರ ನೆರೆ ಹಾನಿ ಪರಿಹಾರ ಪಡೆಯಲು ಬಾಕಿ ಇರುವವರಿಗೆ ಕೂಡಲೇ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪುತ್ತೂರು ಎಸಿ ಗಿರೀಶ್ ನಂದನ್ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡಿ-ಜಿಲ್ಲಾಧಿಕಾರಿ
ಸಾರ್ವಜನಿಕರನ್ನು ಪದೇಪದೇ ಕಚೇರಿಗಳಿಗೆ ಅಲೆದಾಡುವಂತೆ ಮಾಡಬೇಡಿ ಅವರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆಯ ಜತೆ ಹೆಚ್ಚಿನ ಸಲಹೆ, ಸೂಚನೆ ಅಗತ್ಯ ಮಾಹಿತಿಗಳನ್ನು ನೀಡಿ. ಪ್ರತಿ ಸಮಸ್ಯೆಗೂ ಪರಿಹಾರವಿದೆ ಎಂದು ಜಿಲ್ಲಾಧಿಕಾರಿ ರಮೇಶ್ ಕುಮಾರ್ ಎಂ.ಆರ್. ಹೇಳಿದರು.
ಅವರು ಶನಿವಾರ ಕಜಕ್ಕೆ ಶಾಲೆ ವಠಾರದಲ್ಲಿ ನಡೆದ ಮಲವಂತಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲಾಖೆಗೆ ಸಂಬಂಧಪಟ್ಟ ಮಾಹಿತಿ ಇಲ್ಲದ ಗ್ರಾಮದ ಸ್ಥಳಗಳ ಪರಿಚಯ ವಿವರ,ಸಮಸ್ಯೆಗಳ ಕುರಿತ ಅರಿವಿಲ್ಲದ ಅಧಿಕಾರಿಗಳು ಅಗತ್ಯ ಸಭೆಗಳಲ್ಲಿ ಕಾಟಾಚಾರಕ್ಕೆ ಭಾಗವಹಿಸುತ್ತಿರುವುದು ವಿಷಾದನೀಯ. ಇದು ಪುನರಾವರ್ತನೆಯಾಗಬಾರದು. ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಯೋಜನೆಗಳ ಕುರಿತು ಸರಿಯಾದ ಮಾಹಿತಿ ಒದಗಿಸುವಂತೆ ಖಡಕ್ ಸೂಚನೆ ನೀಡಿದರು.
ಸಭೆಗೆ ಹಾಜರಾಗದ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಾಗದ ವಿವಾದದಿಂದ ಶಿಥಿಲಾವಸ್ತೆ ತಲುಪಿರುವ ಮಲವಂತಿಗೆಯ ಮಲೆಕುಡಿಯ ಸಭಾಭವನದ ಜಾಗಕ್ಕೆ ಕುಮ್ಕಿ ವಿರಹಿತ ಆದೇಶವನ್ನು ಸೋಮವಾರ ಸಂಜೆ ಒಳಗೆ ನೀಡುವುದಾಗಿ ತಿಳಿಸಿದರು.
ಮಲವಂತಿಗೆ ಗ್ರಾಮದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಾಗಗಳು ಒಟ್ಟೊಟ್ಟಿಗೆ ಇದ್ದು ಅನೇಕರಿಗೆ ಇದರಿಂದ ಸಮಸ್ಯೆಗಳು ಉಂಟಾಗಿವೆ. ಇಲ್ಲಿ ರೆಖ್ಯ ಗ್ರಾಮದ ಮಾದರಿಯಲ್ಲಿ ಜಿಪಿಎಸ್ ಸಹಿತ ಡ್ರೋನ್ ಮೂಲಕ ಮುಂದಿನ ಹಂತದಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಲಾಗುವುದು ಎಂದು ಪುತ್ತೂರು ಎಸಿ ಗಿರೀಶ್ ನಂದನ್ ಹೇಳಿದರು.
ಎಲೆ ಚುಕ್ಕಿ ರೋಗ ವ್ಯಾಪಕವಾಗಿದ್ದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆಗೆ ಬರುವಾಗ ತೋಟಗಳಲ್ಲಿ ಅಡಕೆ ಮರಗಳು ಇಲ್ಲದ ಸ್ಥಿತಿ ಇದ್ದು ಸರಿಯಾದ ಮೌಲ್ಯಮಾಪನ ಸಿಗದೇ ಪರಿಹಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಎಕರೆ ಆಧಾರದಲ್ಲಿ ಪರಿಹಾರ ನೀಡುವ ಯೋಜನೆ ಬಗ್ಗೆ ಸರಕಾರದ ಗಮನ ಸೆಳೆಯುವ ಕುರಿತು ಅಭಿಪ್ರಾಯ ವ್ಯಕ್ತವಾಯಿತು.
ಎಳನೀರಿನಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದಲ್ಲಿ ಆರೋಗ್ಯ ಸಹಾಯಕರು ಇಲ್ಲದೆ ಪರಿಸರದ ಜನರು ಅಸೌಖ್ಯದ ಸಂದರ್ಭ ದೂರದ ಕಳಸಕ್ಕೆ ಹೋಗಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರು ದೂರಿದರು. ಭಾನುವಾರ ನೂತನ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯಲಿದ್ದು ಮುಂದಿನ ಒಂದು ವಾರದೊಳಗೆ ಇಲ್ಲಿಗೆ ಸಿಬ್ಬಂದಿಯನ್ನು ನೇಮಿಸಿ ಎರಡು ತಿಂಗಳ ತರಬೇತಿ ಬಳಿಕ ಕಳುಹಿಸಿಕೊಡಲಾಗುವುದು ಎಂದು ಡಿಎಚ್ ಒ ಭರವಸೆ ನೀಡಿದರು. ಮಣ್ಣು ತೆಗೆದ ಕಾರಣ
ಮಲವಂತಿಗೆ ಅಂಗನವಾಡಿ ಕೇಂದ್ರ ಅಪಾಯಕಾರಿ ಸ್ಥಿತಿಯಲ್ಲಿದ್ದು ಅದನ್ನು ಸ್ಥಳಾಂತರ ಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದಾಗ,ತಾಪಂ ಇಒ ಇದರ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ಗುತ್ಯಡ್ಕ
ಪ್ರದೇಶದಲ್ಲಿ ಒತ್ತುವರಿಯಿಂದ ರಸ್ತೆಯ ವ್ಯಾಪ್ತಿ ಕಡಿಮೆಯಾಗಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿರುವ ಕುರಿತು ಪ್ರದೇಶದ ಜನರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮಂಗಳವಾರದೊಳಗೆ ಒತ್ತುವರಿ ಜಾಗ ಗುರುತಿಸಿ, ಅದನ್ನು ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಪಿ ಡಬ್ಲ್ಯುಡಿ ಅಧಿಕಾರಿಗೆ ಸೂಚಿಸಿದರು. ಮಲವಂತಿಗೆ ಭಾಗಕ್ಕೆ ಪಿಯು ಕಾಲೇಜು ನಿರ್ಮಾಣವಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಕೊಲ್ಲಿ ಅಂಗನವಾಡಿಗೆ ಕಾರ್ಯಕರ್ತೆ ನೇಮಕ ನರೇಗಾ ಮೂಲಕ ಗ್ರಾಮದ ಅಭಿವೃದ್ಧಿ ಕಾಮಗಾರಿ ನಡೆಸಲು, ನೆನೆಗುದಿಗೆ ಬಿದ್ದಿರುವ ಕಡತಗಳ ಶೀಘ್ರ ವಿಲೇವಾರಿ ಕುರಿತು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಆದೇಶ ನೀಡಿದರು.
ಪುತ್ತೂರು ಎಸಿ ಗಿರೀಶ್ ನಂದನ್, ಡಿ ಎಚ್ ಒ ಡಾ. ಕಿಶೋರ್ ಕುಮಾರ್, ಕಾರ್ಕಳ ವನ್ಯಜೀವಿ ವಿಭಾಗದ ಎಸಿ ಎಫ್ ಕಾಜೋಲ್, ಪುತ್ತೂರು ಅರಣ್ಯ ಇಲಾಖೆ ಎಸಿಎಫ್ ಸುಬ್ರಹ್ಮಣ್ಯರಾವ್, ಭೂ ದಾಖಲೆಗಳ ಉಪನಿರ್ದೇಶಕ ನಿರಂಜನ್, ಹಿಂದುಳಿದ ವರ್ಗಗಳ ಇಲಾಖೆಯ ಉಪನಿರ್ದೇಶಕಿ ರಶ್ಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗೇಶ್ವರ ಬೇವಿನಮಟ್ಟಿ, ಆರ್ ಎಫ್ ಒಗಳಾದ ತ್ಯಾಗರಾಜ್,ಸ್ವಾತಿ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಸ್ವಾಗತಿಸಿದರು. ಸಿ ಆರ್ ಪಿ ರಮೇಶ್ ಫೈಲಾರ್ ವಂದಿಸಿದರು. ಅಗ್ನಿಪಥ್ ಗೆ ಆಯ್ಕೆಯಾದ ಮಲವಂತಿಗೆ ಗ್ರಾಮದ ಸೂರಜ್ ಗೌಡ ಅವರನ್ನು ಅಭಿನಂದಿಸಲಾಯಿತು.
ಕಳೆಂಜ ಗ್ರಾಮದ ಮಾಣಿಗೇರಿಯ ಸುಮಾರು 40 ಕುಟುಂಬಗಳಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ 1992ರಲ್ಲಿ ಜಾಗ ಮಂಜೂರಾಗಿದ್ದು ಅರಣ್ಯ ಇಲಾಖೆಯ ಎನ್ ಒ ಸಿ ಇದ್ದರು ಅಗತ್ಯ ದಾಖಲೆಗಳನ್ನು ನೀಡಲು ಕಂದಾಯ ಇಲಾಖೆ ಸತಾಯಿಸುತ್ತಿರುವ ಕುರಿತು ಅಲ್ಲಿನ ಗ್ರಾಮಸ್ಥರು ಡಿಸಿ ಅವರ ಗಮನಕ್ಕೆ ತಂದು ಅಗತ್ಯ ದಾಖಲೆಗಳನ್ನು ನೀಡಿದರು. ಇದು ಇಲ್ಲಿಗೆ ಸಂಬಂಧಪಟ್ಟ ಸಮಸ್ಯೆ ಅಲ್ಲವಾದರೂ,ಅಲ್ಲಿನ ಜನರ ಮನವಿ ಮೇರೆಗೆ ದಾಖಲೆಗಳನ್ನು ಪರಿಶೀಲಿಸಿದ ಅವರು ಮುಂದಿನ ಒಂದು ವಾರದೊಳಗೆ ಹಕ್ಕುಪತ್ರ ನೀಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದರು. ದಾಖಲೆಗಳು ಸಿಗಲು ವಿಳಂಬವಾದಲ್ಲಿ ಕೂಡಲೇ ತನ್ನ ಗಮನಕ್ಕೆ ತರುವಂತೆ ತಿಳಿಸಿದರು.