News Kannada
Thursday, February 02 2023

ಮಂಗಳೂರು

ಮಂಗಳೂರು: ಜ.8, ಬೈಲು ಮೂಡುಕರೆ ಕುಟುಂಬದ ನವೀಕೃತ ಮನೆಯ ಗೃಹಪ್ರವೇಶ

Photo Credit : News Kannada

ಮಂಗಳೂರು: ಇದೇ ಬರುವ ಜನವರಿ 8ನೇ ಆದಿತ್ಯವಾರ ಬೆಳಿಗ್ಗೆ 300 ವರ್ಷಗಳ ಇತಿಹಾಸವಿರುವ ಬೈಲುಮೂಡುಕರೆ ಕುಟುಂಬದ ನವೀಕೃತ ಮನೆಯ ಗೃಹಪ್ರವೇಶ ನಡೆಯಲಿರುವುದಾಗಿ ಬೈಲುಮೂಡುಕರೆ ಮನೆತನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೆಡ್ಯೆ ಮಂಜುನಾಥ ಭಂಡಾರಿ ಬೈಲುಮೂಡುಕರೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅದೇ ದಿನ ಬೆಳಗ್ಗೆ ಗಂಟೆ 11.30ಕ್ಕೆ ಬೈಲುಮೂಡುಕರೆ ದಿ ಚಂದ್ರಶೇಖರ ಶೆಟ್ಟಿ ವೇದಿಕೆಯಲ್ಲಿ ಬೈಲುಮೂಡುಕರೆ ಮನೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಡಾ| ಎಂ. ಮೋಹನ್ ಆಳ್ವ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀ ದೇವಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶೆಡ್ಯೆ ಮಂಜುನಾಥ್ ಭಂಡಾರಿ ಬೈಲು ಮೂಡುಕೆರೆ, ಹರೀಶ್ ಶೆಟ್ಟಿ, ದೇವದಾಸ ನಾಯ್ಕ್,ಸತೀಶ್ ಆಳ್ವ, ಭುಜಂಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬೈಲು ಮೂಡುಕರೆ ಕುಟುಂಬದ ಹಿನ್ನೆಲೆ:

ಬೈಲು ಮೂಡುಕೆರೆ ಮನೆಯ ಇತಿಹಾಸವು ಸಾಧಾರಣ 300 ವರ್ಷಗಳಿಗೆ ಮೇಲ್ಪಟ್ಟುದ್ದಾಗಿದ್ದು ಪ್ರಸ್ತುತ ಈಗ ಇರುವಂತಹ ಈ ಮನೆಯನ್ನು 17ನೇ ಶತಮಾನದ ಅಂತ್ಯದಲ್ಲಿ ನಿರ್ಮಿಸಿದ್ದಾಗಿ ತಿಳಿದು ಬರುತ್ತದೆ. ಪ್ರಕೃತ ಭೂಮಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತು ಕುಟುಂಬಿಕರ ಸಂತತಿ ನಕ್ಷೆಯನ್ನು ಗಮನಿಸಿದಾಗ, ಸ್ಮರಣೆ ಮತ್ತು ಸ್ಪುರಣೆಗಳಿಂದ ತಿಳಿದು ಬಂದಂತೆ ಅಳಿಯ ಸಂತಾನ ಪದ್ಧತಿಯನ್ನು ಆಚರಿಸಿಕೊಂಡು ಬಂದ ಈ ಕುಟುಂಬದ ಹಿರಿಯ ವ್ಯಕ್ತಿ ತೌಡ ಶೆಟ್ಟಿ ಯಾನೆ ಕಾಂತಪ್ಪ ಶೆಟ್ಟಿ ಎಂದು ಇದ್ದು, ಇವರ ಸಹೋದರಿ ಲಕ್ಷ್ಮಿ ಸಂತಾನದವರಿಂದ ಈ ಕುಟುಂಬವು ಮುಂದುವರಿದಂತಿದೆ.

ಬೈಲು ಮೂಡುಕರೆ ಕುಟುಂಬವು ಬಂಟ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಪಡೆದಿರುತ್ತದೆ. ಈ ಕುಟುಂಬದವರು ಸತ್ಯಸಂಧರು, ಧರ್ಮಿಷ್ಠರು, ಬಹುಮಿತ್ರರು, ಸಾಹಸಿಗರು, ದಾನಿಗಳು, ಶ್ರಮಜೀವಿಗಳಾಗಿದ್ದು ಸಮಾಜ ನಿರ್ಮಾಣದಂತಹ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅಲ್ಲದೆ ದೈವ ಭಕ್ತಿವುಳ್ಳವರಾಗಿದ್ದು ತಮ್ಮದೆ ಸ್ವಂತ ನೆಲೆಯಲ್ಲಿ ದೇವಸ್ಥಾನ, ದೈವಸ್ಥಾನ, ದೈವದ ಚಾವಡಿಗಳು, ನಾಗಾಲಯ ಇತ್ಯಾದಿಗಳನ್ನು ನಿರ್ಮಿಸಿಕೊಂಡು ಊರವರನ್ನು ಸೇರಿಸಿಕೊಂಡು ಆರಾಧಿಸುತ್ತಿದ್ದಾರೆ. ನಮ್ಮ ಗಡಿನಾಡು ಕೇರಳದಿಂದ ಹಿಡಿದು ಉತ್ತರ ಬೊಂಬಾಯಿ ತನಕ ನಡೆಯುವ ದೇವತಾ ಉತ್ಸವಗಳಲ್ಲಿ ಈ ಮನೆಯವರ ಪಾತ್ರ ಇದ್ದೆ ಇದೆ.

ಬಂಟ ಸಮಾಜದ ಪ್ರತಿಷ್ಠಿತ ಮನೆತನಗಳಾಗಿದ್ದ ಕೊಡಿಯಾಲ್ ಗುತ್ತು, ಜಪ್ಪು ಗುಡ್ಡೆ ಗುತ್ತು, ಪುತ್ತಿಗೆ ಗುತ್ತು ಮುಂಡುದೆಗುತ್ತು, ಕೂರಿಯಾಳ, ಕುಳ, ಬೆಳ್ಳಿಪಾಡಿ, ಹಂದಾಡಿ ತೆಂಕುಮನೆ, ಅಮುಣಿಂಜೆ ಗುತ್ತು, ಭಾರಿಂಜೆ, ಮೂಡುಕರೆ ಗುತ್ತು, ಸೊಂತಾಡಿ ಮನೆತನ, ಕಂದಾವರ ಬಾಳಿಕೆಗಳೊಂದಿಗೆ ನೆಂಟಸ್ತಿಕೆಯನ್ನು ಹೆಣೆದುಕೊಂಡು ವಂಶವನ್ನು ಬೆಳೆಸಿಕೊಂಡರು. ಇದರಲ್ಲಿ ಮುಖ್ಯವಾಗಿ ಬೈಲು ಮಾಗಣೆಯಲ್ಲಿ ಹೆಸರು ಪಡೆದಿರುವ ಬೈಲ ಬಂಗೇರಣ್ಣ ಕುಲದ ಮನೆಗಳಾದ ಬೈಲು ಮೇಗಿನ ಮನೆ, ಹೊಸ ಮನೆಗಳಿಗೆ ಅಂದಿನಿಂದ ಇಂದಿನವರೆಗೂ ತಲೆತಲಾಂತರ ಎಂಬಂತೆ ಸಂಬಂಧವನ್ನು ಬೆಳೆಸಿಕೊಂಡು ಕರಾವಳಿಯ ಏಳು ಗ್ರಾಮಗಳಲ್ಲಿ ಸಂಪತ್ತನ್ನು ವೃದ್ಧಿಸಿ ಅಲ್ಲಲ್ಲಿ ನೆಲೆಗಳನ್ನು ಸ್ಥಾಪಿಸಿಕೊಂಡರು.

See also  ಮಾರ್ಚ್ 28-29ರಂದು ನಡೆಯಲಿದೆ ಅಖಿಲ ಭಾರತ ಸಾರ್ವತ್ರಿಕ ಮಹಾಮುಷ್ಕರ

ಪ್ರಕೃತ ಈ ಕುಟುಂಬವು ಅನೇಕ ಊರುಗಳಲ್ಲಿ ನೆಲೆಗಳನ್ನು ಮಾಡಿಕೊಂಡಿದ್ದರೂ ಮಂಗಳೂರು ಸೀಮೆಯ ಕಾವೂರು ಮತ್ತು ಬೈಲು ಮಾಗಣೆಯ ಮೂಡುಕರೆಯಲ್ಲಿ ತಮ್ಮ ಮೂಲಸ್ಥಾನಗಳನ್ನು ಹೊಂದಿ ಇಂದಿಗೂ ಈ ಊರಿನ ಕಾರ್ಯಕ್ರಮಗಳಲ್ಲಿ ಪ್ರತಿಷ್ಠಿತ ಸ್ಥಾನಮಾನದಿಂದ ದೈವದೇವರ ಸೇವೆಗಳನ್ನು ಮಾಡುತ್ತಾ ಜನಾನುರಾಗಿಗಳಾಗಿರುತ್ತಾರೆ.

ಏತಮೊಗರು ದೊಡ್ಡಮನೆಯೆಂಬ ಈ ತಾಣವು ಹಿಂದೆ ಜೈನ ಪಾಳೆಯಗಾರರ ವಶದಲ್ಲಿದ್ದು ಇದರಲ್ಲಿ ಪಂಚ ಶಕ್ತಿಗಳನೊಳಗೊಂಡ ಜುಮಾದಿ ಮತ್ತು ಬಂಟನ ಚಾವಡಿಯಲ್ಲಿ ಉಯ್ಯಾಲೆಗಳಿವೆ. ಇವು ಒಂದು ಕಾಲದಲ್ಲಿ ಬಿಲ್ಲವ
ವರ್ಗದ ಪಂಡ ಪೂಜಾರಿಯ ಅಧೀನದಲ್ಲಿದ್ದು ಅವರಿಂದ ಪೂಜಿಸಲ್ಪಡುತ್ತಿತ್ತು. ನಂತರ ಒಂದನೆ ಯಜಮಾನರಾಗಿದ್ದ ಬೈಲು ಮೂಡುಕರೆ ಶ್ರೀ ದಿ. ತೌಡ ಶೆಟ್ಟಿ ಎಂಬವರ ಅಳಿಯಂದಿರಲ್ಲಿ ಹಿರೇ ಭಾಗದ ಕಿಂಞಣ್ಣ ಶೆಟ್ಟಿ ಎಂಬವರು ಸುಮಾರು 1830ರ ದಶಕದಲ್ಲಿ ಏತಮೊಗರು ದೊಡ್ಡಮನೆ ಮತ್ತು ಕೊಪ್ಪಲ ಎಂಬ ಆಸ್ತಿಗಳನ್ನು ಕ್ರಯಕ್ಕೆ ಖರೀದಿಸಿದಾಗ ಈ ಆಸ್ತಿಯ ಮಾಲಕತ್ವವು ಮೂಡುಕರೆಯವರ ಅಧೀನಕ್ಕೆ ಬಂತು, ಕಿಂಞಣ್ಣ ಶೆಟ್ಟಿಯವರು ಕುಟುಂಬದ ಸಂಪತ್ತನ್ನು ವೃದ್ಧಿ ಪಡಿಸಿದರು.

ಇವರ ಕಾಲದಲ್ಲಿ ಮನೆಯಲ್ಲಿ ಕಂಬಳದ ಕೋಣಗಳಿದ್ದು ಬಹುಮಾನಗಳನ್ನು ಪಡೆದು ಊರಿನ ಗೌರವವನ್ನು ಪಸರಿಸಿ ಹೆಸರುವಾಸಿಯಾಗಿದ್ದರು. 1956 ರ ಸುಮಾರಿಗೆ 5ನೇ ಕುಳ ಮುಂಡಪ್ಪ ಶೆಟ್ರು ಪೂಜೆಗಳು ನಡೆಯುವಂತೆ ವ್ಯವಸ್ಥೆ ಮಾಡಿದರು. 1976 ಸರಿಸುಮಾರಿಗೆ ತಲೆಮಾರಿನ ಚಂದ್ರಶೇಖರ ಶೆಟ್ರು ಈ ದೇವಸ್ಥಾನಕ್ಕೆ ಸುತ್ತು ಪೌಳಿ, ನಾಗಾಲಯ ದೈವಗಳ ಸಾನಿಧ್ಯ ಪೂರ್ಣ ದೇವಸ್ಥಾನದ ಆಕಾರವನ್ನು ಕೊಟ್ಟರು. ಇತ್ಯಾದಿಗಳನ್ನು ಮಾಡಿ ನಿತ್ಯ ಪೂಜೆಗಳು ನಡೆಯುವಂತೆ ಮಂಜುನಾಥ ಭಂಡಾರಿಯವರು ಶ್ರಮಪಟ್ಟು ನಂತರದ ದಿನಗಳಲ್ಲಿ ಇವರ ಅಳಿಯ 6ನೇ ತಲೆಮರಿನ ಕುಟುಂಬಿಕರನ್ನೂ ಬಂಧು ಬಳಗವನ್ನೂ ಸೇರಿಸಿಕೊಂಡು ಎರಡು ಬ್ರಹ್ಮಕಲಶವನ್ನು ಮಾಡಿದ್ದಾರೆ. ಈ ನಾಲ್ಕು ಬ್ರಹ್ಮಕಲಶಗಳೂ ಕೂಡಾ ಶ್ರೀ ಪಂಚಮಿಯಂದೇ ನಡೆದದ್ದು ವಿಶೇಷ.

ಈಗ ಅಲ್ಲೊಂದು ಸುಂದರ ದೇವಸ್ಥಾನವು ನಿರ್ಮಾಣವಾಗಿ ಕುಟುಂಬಿಕರು ಮತ್ತು ಊರವರಿಗೆ ಪ್ರಾರ್ಥನ ತಾಣವಾಗಿ ಶುಭ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲಿ ನಡೆಯುವ ಶುಭ ಕಾರ್ಯಕ್ರಮಗಳಿಗೆ ಬೇಕಾಗುವ ಆಸನ, ಬೆಳಕು, ಅಡುಗೆ ಪಾತ್ರೆಗಳು ಇತ್ಯಾದಿ ಸಲಕರಣೆಗಳು ಬಾಡಿಗೆ ರಹಿತವಾಗಿ ಉಚಿತವಾಗಿ ದೊರೆಯುತ್ತಿದೆ.

ಮುಡಾರೆ ಎಂಬ ಟ್ರಸ್ಟ್ ಸ್ಥಾಪಿಸಿ ಅಸಹಾಯಕ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ 60 ರಿಂದ 80 ಮಕ್ಕಳಿಗೆ ಧನಸಹಾಯವನ್ನು ಮಾಡುತ್ತಿದ್ದಾರೆ. ಈಗ ಕಾಣುತ್ತಿರುವ ಈ ಮನೆಯು ಸಾಧಾರಣ 300 ವರ್ಷಗಳ ಕುರುಹುಗಳನ್ನು ಕೊಡುತ್ತಿದೆ. ಪ್ರಾರಂಭದಲ್ಲಿ ಹುಲ್ಲಿನ ಛಾವಣಿಯಾಗಿದ್ದ ಈ ಮನೆಗೆ ನಂತರದ ದಿನಗಳಲ್ಲಿ ತಪ್ಪಿ ಓಡು’ ಎಂಬ ಕುಂಬಾರರಿಂದ ನಿರ್ಮಿಸಿದ ಹಂಚನ್ನು ಹಾಕಲಾಗಿತ್ತು. 19 ನೇ ಶತಮಾನದಲ್ಲಿ ಬಾಸೆಲ್ ಮಿಶನರಿಗಳಿಂದ ನಿರ್ಮಿಸಲ್ಪಟ್ಟ ಮಂಗಳೂರು ಹಂಚಿನ ಮನೆಯಾಗಿ ಪರಿವರ್ತನೆಗೊಂಡಿತು.

ಈ ಮನೆಯ ವಿಶೇಷವೆಂದರೆ ಮೂಲದಲ್ಲಿ ಹಿರಿಯರು ಹಾಕಿದ ಕೆಸರು ಕಲ್ಲನ್ನು ಮತ್ತು ಪಂಚಾಂಗವನ್ನು ವಿಕೃತಗೊಳಿಸದೆ ಕಲ್ಲಿನ ಕಂಬ, ಮಣ್ಣಿನ ಗೋಡೆ, ಕೆಲವು ಕಡೆ ಕಲ್ಲಿನ ಗೋಡೆಯಿಂದ ಅಗತ್ಯಕ್ಕೆ ತಕ್ಕಂತೆ ವಾಸ್ತುಶಾಸ್ತ್ರಕ್ಕೆ ಕುಂದು ಬಾರದಂತೆ ನಾಲ್ಕು ಸುತ್ತಲೂ ಪಾಗಾರ, ಹಟ್ಟಿ-ಕೊಟ್ಟಿಗೆ ಬರಕಲ) ನಿರ್ಮಾಣವಾಗಿತ್ತು.

See also  ಹೊಸದಿಗಂತ ಕನ್ನಡ ದೈನಿಕದ ವರದಿಗಾರ ಮಿಥುನ ಕೊಡೆತ್ತೂರು ಪ.ಗೋ. ಪ್ರಶಸ್ತಿಗೆ ಆಯ್ಕೆ

ಈಶಾನ್ಯದಲ್ಲಿ ಸದಾ ನೀರಿರುವ ದೊಡ್ಡ ಕೆರೆ ನಾಲ್ಕು ಸುತ್ತಲೂ ಭತ್ತ ಬೆಳೆಯುವ ಗದ್ದೆಗಳು ನೈರುತ್ಯದಲ್ಲಿ ನಾಗಾಲಯ ಇದಕ್ಕೆ ಎದುರಾಗಿ ಪಶ್ಚಿಮದಲ್ಲಿ ಮಾಗಣೆಯ ದೈವಗಳ ಸ್ಥಾನ ಈ ದೈವಗಳಿಗೂ, ಈ ನಾಗದೇವರ ಸಾನಿಧ್ಯಕ್ಕೂ ನೇರದೃಷ್ಟಿ ಸಂಪರ್ಕ ಇದೆ. ತೆಂಕು ದಿಕ್ಕಿಗೆ ವಿಶಾಲವಾದ ಅಂಗಳ. ಇದರ ತೆಂಕಿಗೆ 7 ಜೋಡಿ ಕೋಣಗಳ ಹಟ್ಟಿ ಅಲ್ಲಿಂದ ಉತ್ತರಕ್ಕೆ 9 ಕಲ್ಲಿನ ಕುಳಿಗಳು ಬತ್ತ ಕುಟ್ಟುವ ಬರಕಲ, ಆಯತ ಆಕಾರದಲ್ಲಿರುವ ಈ ಮನೆಯ ಮೇಲೆ 7 ಕೋಣೆಗಳುಳ್ಳ ಮಾಳಿಗೆ ಈ ಮಾಳಿಗೆಗಳ ಮೇಲೆ ಮೆತ್ತಿಗೆ ರೂಪದಲ್ಲಿ ವಿಶಾಲವಾದ ಒಂದೇ ಮಾಳಿಗೆ.

ಚಾವಡಿಯಲ್ಲಿ ದೊಡ್ಡದಾದ ಉಯ್ಯಾಲೆ ಇದೆ. ಈ ಉಯ್ಯಾಲೆ ರಾಜರಿಗೆ ಸಂಬಂಧ ಪಟ್ಟ ಮನೆಗಳಲ್ಲಿರುತ್ತದೆ. ಹಿಂದಿನ ಕಾಲದಲ್ಲಿ ರಾಜ ವಂಶದವರ ಮನೆಯಲ್ಲಿ ಮಾತ್ರ ಇರಲು ಸಾಧ್ಯ. ಇಂಥಹ ಉಯ್ಯಾಲೆ ಕೊಡಿಯಾಲ್ ಗುತ್ತಿನಲ್ಲಿ ಇದೆ. ಈ ಮನೆಯಲ್ಲಿ ಊಟಕ್ಕೆ ದಿವಸಕ್ಕೆ ಒಂದು ಮುಡಿ ಅಕ್ಕಿ ಬೇಕಾಗುತ್ತಿತ್ತು. ಒಂದೇ ಮನೆಯಿಂದ 30ರಿಂದ 40 ಮಕ್ಕಳು ಕಿನ್ನಿಕಂಬಳ ಶಾಲೆಗೆ ಹೋಗುತ್ತಿದ್ದೆವು.

ಊರಿನ ಜಾತ್ರೆ ಬೈಲಬಂಡಿಗೆ ತುಂಬಾ ಮಂದಿ ನೆಂಟರು, ಮತ್ತು ಬೈಲು ಬಂಡಿ ಆಗುವಲ್ಲಿ ಹೊಟೇಲ್ ಇಲ್ಲದ ಕಾರಣ ದೊಂದಿ ಮತ್ತು ದೀವಟಿಕೆ ಹಿಡಿಯುವ ಜನರು, ಕರ್ಮಿಗಳು ಮತ್ತು ಮೋಗವೀರ ಸಮಾಜದ ಬಂಧುಗಳ ಕಡಿಮೆ ಎಂದರೆ 80 ರಿಂದ 100 ಮಂದಿ ಊಟಕ್ಕೆ ಈ ಮನೆಗೇ ಬರುತ್ತಿದ್ದರು.

ಅದ್ಯಪಾಡಿಯಲ್ಲಿರುವ ಬಂಟಸ್ಥಾನವು ಈ ಕುಟುಂಬದ ಅಧೀನದಲ್ಲಿದೆ. ಇದಕ್ಕಿಂತಲೂ ಹಿಂದೆ ಕಾವೂರಿನ ಬಂಟನ ಸ್ಥಾನ ಮತ್ತು ಚಾವಡಿ ಈ ಕುಟುಂಬದವರಿಗಿದ್ದು, ಅಲ್ಲಿ 2ನೇ ಸ್ಥಾನದ ಮರ್ಯಾದೆ ಈ ಕುಟುಂಬಕ್ಕಿದೆ. ಬೈಲು ಮಾಗಣೆಯಲ್ಲಿ ಕೊಳಂಬೆ ಗ್ರಾಮದಲ್ಲಿರುವ ಕೌಡೂರು ಎಂಬಲ್ಲಿಂದ ಕೊಡಮಣಿತ್ತಾಯ ದೈವದ ಭಂಡಾರವೂ ಈ ಕುಟುಂಬಿಕರ ಹೊಣೆಯಲ್ಲಿದ್ದು, ಅಲ್ಲಿಯೂ ಆಸ್ತಿಯನ್ನು ಹೊಂದಿರುತ್ತರೆ, ಕಾಲದಲ್ಲಿ ದೈವಗಳು ಪ್ರಥಮವಾಗಿ ಈ ಸ್ಥಾನಕ್ಕೆ ಬಂದು ಹಿರಿಯರ ಭಕ್ತಿಗನುಸಾರ ಮಾಗಣೆಯ ಭಕ್ತರು ನಿರ್ಮಿಸಿದ ಸ್ಥಾನದಲ್ಲಿ ಪೀಠಸ್ಥರಾದರೆಂದು ಹೇಳಲ್ಪಟ್ಟಿದ್ದು, ದೈವಗಳು ಬಂಡಿ (ರಥ) ಸಮೇತ ಮಾಗಣೆಯ ಭಕ್ತರೊಂದಿಗೆ ಈ ಪುಣ್ಯಸ್ಥಳಕ್ಕೆ ಬಂದು ಭೇಟಿಯಾಗಿ ಈ ಕುಟುಂಬಕ್ಕೆ, ಅವರ ಹಿರಿಯರನ್ನು ಸ್ಮರಿಸಿ ಪ್ರಸಾದವನ್ನು ಕೊಟ್ಟು
ಆಶೀರ್ವದಿಸುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು