ಬಂಟ್ವಾಳ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.೮ರಂದು ಬೆಳಗ್ಗೆ ೯.೪೧ರಿಂದ ೧೦.೨೬ರ ವರೆಗಿನ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ ನಡೆಯಿತು.
ಕ್ಷೇತ್ರದಲ್ಲಿ ಡಿ.೩ರಿಂದ ಆರು ದಿನಗಳ ಕಾಲ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ನಡೆದಿದ್ದು, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಧರ್ಮ ಸಭೆಗಳು ನಡೆದವು, ಈ ಎಲ್ಲಾ ದಿನಗಳಲ್ಲಿ ನಿರಂತರವಾಗಿ ಬೆಳಗ್ಗೆ ಹಾಗೂ ಸಾಯಂಕಾಲ ಉಪಹಾರ ಮಧ್ಯಾಹ್ಮ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆದಿದ್ದು, ದಿನಂಪ್ರತಿ ಊರ- ಪರವೂರ ಸಾವಿರಾರು ಮಂದಿ ಶ್ರೀ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದು, ಅನ್ನ ಪ್ರಸಾದ ಸ್ವೀಕರಿಸಿದರು.
ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕಾಗಿ ಗ್ರಾಮಸ್ಥರಿಂದ ಹಸಿರು ಹೊರೆ ಕಾಣಿಕೆ ಸಾಗರೋಪದಿಯಲ್ಲಿ ಹರಿದು ಬಂದಿದ್ದು, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಕೊನೆಯ ದಿನವೂ ಕೂಡಾ ಶ್ರೀ ದೇವಾಲಯದ ಉಗ್ರಾಣ ಹಸಿರು ಹೊರೆ ಕಾಣಿಕೆಯಿಂದ ತುಂಬಿ ತುಳುಕುತ್ತಿತ್ತು. ಮೈಸೂರಿನ ಎಸ್.ಎಲ್.ವಿ.ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಮಾಲಕರಾದ ಇಡ್ಕಿದು ಗ್ರಾಮದ ನೇರ್ಲಾಜೆ ದಿ.ರಾಮದಾಸ್ – ದಿ. ಸುಂದರಿ ರಾಮದಾಸ್ ರವರ ಪುತ್ರ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ದಿವಾಕರ ದಾಸ್ ನೇರ್ಲಾಜೆಯವರು ತಮ್ಮ ಸೇವಾರ್ಥವಾಗಿ ಇಡೀ ದೇವಾಲಯವನ್ನು ಹೂವಿನಿಂದ ಅಲಂಕಾರ ಮಾಡಿಸಿದ್ದರು. ವಿವಿಧ ಬಗೆಯ ಕಣ್ಮನ ಸೆಳೆಯುವ ಹೂವಿನಿಂದ ಅಲಂಕೃತಗೊಂಡಿರುವ ದೇವಾಲಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬವಾಗಿತ್ತು.
ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಸಮಿತಿಯ ಪ್ರಮುಖರು, ಸ್ವಯಂಸೇವಕರು ಬಂದ ಭಕ್ತಾದಿಗಳಿಗೆ ನೀಡಿದ ಗೌರವಾದರಗಳ ಆತಿಥ್ಯ, ತೋರಿದ ಪ್ರೀತಿ, ಅಲ್ಲಿನ ಅಚ್ಚುಕಟ್ಟು, ಶಿಸ್ತು, ಸ್ವಚ್ಛತೆ ಹಾಗೂ ಅವರ ಐಕ್ಯತೆ ಇವೆಲ್ಲವೂ ಧನ್ಯತಾ ಭಾವನೆ ಮೂಡಿಸಿದೆ ಎಂಬಂತಹ ಹೊಗಳುವಿಕೆಯ ಮಾತುಗಳು ಪರವೂರ ಭಕ್ತಾದಿಗಳಿಂದ ಕೇಳಿ ಬಂತು.
ಎಲ್ಲೆಡೆ ಸ್ವಚ್ಚತೆಗೆ ಪ್ರಾಧಾನ್ಯತೆ ನೀಡಲಾಗಿತ್ತು, ಪ್ರತೀ ದಿನ ಭಜನೆ, ನೃತ್ಯಭಜನೆ, ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ಮೊದಲಾದ ಕಾರ್ಯಕ್ರಮಗಳು ಒಂದು ಮಾದರಿಯಾಗಿತ್ತು. ಒಟ್ಟಾರೆ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಹಾಗೂ ಆಡಳಿತ ಮೊಕ್ತೇಸರ ಸುರೇಶ್ ಕೆ.ಎಸ್.ಮುಕ್ಕುಡ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಪನ್ನ ಗೊಂಡಿತು.