ಮಂಗಳೂರು: ಪಚ್ಚನಾಡಿ ಕಸದ ಭೂಭರ್ತಿ ತಾಣದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ಮೇಯರ್ ಜಯಾನಂದ ಅಂಚನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ. 6ರಂದು ಮಧ್ಯಾಹ್ನ 1.30ರ ಸುಮಾರಿಗೆ ಹಳೆಯ ಕಸದ ರಾಶಿಗೆ ಬೆಂಕಿ ತಗುಲಿತ್ತು, ಬಿರುಸಾದ ಗಾಳಿಯಿಂದಾಗಿ ಬೆಂಕಿ ಸಾಕಷ್ಟು ಬೇಗ ಇಡೀ ಜಾಗವನ್ನು ಆಕ್ರಮಿಸಿಕೊಂಡಿತು. ಬೆಂಕಿಯ ಜ್ವಾಲೆಗಳಿಂದ ಆ ಪ್ರದೇಶವನ್ನು ತಲುಪಲು ಮೊದಲಿಗೆ ಕಷ್ಟವಾಗಿತ್ತು. ಗಾಳಿಯ ಆರ್ಭಟ ಇಳಿಕೆಯಾದ ಬಳಿಕ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. 13 ಅಗ್ನಿಶಾಮಕ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿವೆ, ಜೆಸಿಬಿ, ಹಿಟಾಚಿಗಳನ್ನು ಬಳಸಿ ಕಸವನ್ನು ಮಗುಚಿ ಹಾಕುವ ಮೂಲಕ ಬೆಂಕಿ ಹರಡದಂತೆ ಕ್ರಮಕೈಗೊಂಡಿದ್ದೇವೆ’ ಎಂದರು.
ಬೆಂಕಿ ತಗುಲಿದ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಬೆಂಕಿ ಉಂಟಾಗಲು ಮಾನವ ಚಟುವಟಿಕೆ ಕಾರಣ ಎಂಬುದನ್ನು ಪುಷ್ಟಿಕರಿಸುವ ದೃಶ್ಯಗಳು ಅದರಲ್ಲಿ ದಾಖಲಾಗಿಲ್ಲ. ಕಸದಿಂದ ಉಂಟಾದ ಅನಿಲದಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ’ ಎಂದರು.
‘ಪರಿಸರ ತಜ್ಞರ ತಂಡ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣೆ ತಂಡದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಸ್ಥಳದಲ್ಲಿ ಹೆಚ್ಚುವರಿಯಾಗಿ ನೀರಿನ ತೊಟ್ಟಿ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ’ ಎಂದರು.
‘ಬೆಂಕಿ ಅನಾಹುತ ತಡೆಯಲು ಕಸದ ಭೂಭರ್ತಿ ತಾಣದಲ್ಲಿ ಸ್ಪಿಂಕ್ಲರ್ಗಳನ್ನು ಅಳವಡಿಸಲಾಗುತ್ತದೆ. ನೀರಿನ ಮೂಲಕ್ಕಾಗಿ ಕೊಳವೆಬಾವಿ ವ್ಯವಸ್ಥೆ ಮಾಡುತ್ತೇವೆ. ಪರ್ಯಾಯ ನೀರಿನ ಮೂಲಗಳಿಗೂ ಹುಡುಕುತ್ತಿದ್ದು, ಮುಂದಿನ ಮಳೆಗಾಲದೊಳಗೆ ಈ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ’ ಎಂದು ಮೇಯರ್ ತಿಳಿಸಿದರು.
ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ‘ಬೆಂಕಿಯಿಂದಾಗಿ 10 ದಿನಗಳ ಕಾಲ ತೀವ್ರ ಹೊಗೆ ಆವರಿಸಿದ್ದರಿಂದ ಪಚ್ಚನಾಡಿ ಆಸುಪಾಸಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಯಾಗಿರುವ ಸಾಧ್ಯತೆ ಇದೆ. ಇದನ್ನು ಪರಿಶೀಲಿಸಲು ಕ್ರಮ ಕೈಗೊಂಡಿದ್ದೇವೆ. ವಾಮಂಜೂರು, ಪಚ್ಚನಾಡಿ, ಕಾವೂರು, ಕುಡುಪು, ಬೋಂದೆಲ್, ಪದವಿನಂಗಡಿ ಮತ್ತು ಇತರ ಪ್ರದೇಶಗಳಲ್ಲಿ ಆರೋಗ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಯಾರಲ್ಲೂ ಆರೋಗ್ಯ ಸಮಸ್ಯೆ ಉಂಟಾಗಿರುವುದು ಕಂಡುಬಂದಿಲ್ಲ. ಸ್ಥಳೀಯರ ಆರೋಗ್ಯದ ಮೇಲೆ ನಿಗಾ ಇಡುವುದನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದರು.