ಬಂಟ್ವಾಳ: ರಸ್ತೆ ಮುಚ್ಚಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಹೆದ್ದಾರಿ ಕಾಮಗಾರಿ ನಡೆಸುವ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸಾರ್ವಜನಿಕ ರಸ್ತೆಯನ್ನು ಮುಚ್ಚಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಇಲ್ಲಿನ ನಿವಾಸಿಗಳು ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಕಾಮಗಾರಿಗೆ ಅಡ್ಡಿಪಡಿಸುವುದಕ್ಕೆ ಮುಂದಾದರು.
ಸಾರ್ವಜನಿಕ ರಸ್ತೆಯನ್ನು ಮುಚ್ಚಿ ಕಾಮಗಾರಿ ನಡೆಸುತ್ತಿರುವ ಕಂಪೆನಿ ಖಾಸಗಿ ಜಾಗವನ್ನು ಅತಿಕ್ರಮಣ ಮಾಡಿ ರಸ್ತೆ ನಿರ್ಮಿಸಿ ಕೈ ತೊಳೆದು ಕುಳಿತುಕೊಂಡಿತ್ತು.
ಖಾಸಗಿ ಜಮೀನಿನ ಅತಿಕ್ರಮಣ ಮಾಡಿ ರಸ್ತೆ ನಿರ್ಮಾಣ ಮಾಡಿದ ಬಳಿಕ ಗುತ್ತಿಗೆ ವಹಿಸಿಕೊಂಡ ಕಂಪೆನಿ ಜಮೀನಿನ ಮಾಲಕರ ಜೊತೆಯಾಗಲಿ ಅಥವಾ ಸಾರ್ವಜನಿಕರ ಜೊತೆಯಾಗಲಿ ಮಾತನಾಡುವುದಕ್ಕೆ ಮುಂದಾಗಿಲ್ಲ. ಹಿಗಾಗಿ ಇದೇ ಖಾಸಗಿ ಜಮೀನಿನಲ್ಲಿ ನಿರ್ಮಿಸಿದ ರಸ್ತೆಯನ್ನು ಇವರು ಖಾಯಂ ರಸ್ತೆಯಾಗಿ ಮಾರ್ಪಾಡು ಮಾಡುತ್ತಾರೆ ಎಂದು ಗ್ರಹಿಸಿ ಖಾಸಗಿ ಜಮೀನಿನ ಮಾಲಕ ರಸ್ತೆಯನ್ನು ಬಂದ್ ಮಾಡಿದರು.
ರಸ್ತೆಯನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಯಿಂದ ಅ ಭಾಗಕ್ಕೆ ತೆರಳಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣ ವಾಯಿತು.
ಈ ಕಾರಣಕ್ಕಾಗಿ ಗ್ರಾಮಸ್ಥರು ಇಂದು ಜ.30 ರಂದು ಬೆಳಿಗ್ಗೆ ರಸ್ತೆಗಿಳಿದು ಕಾಮಗಾರಿ ನಡೆಸುವ ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕಂಪೆನಿಯ ಡೈರೆಕ್ಟರ್ ಗಳನ್ನು ಸ್ಥಳಕ್ಕೆ ಕರೆಸಿದ ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ಅವರು ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಗಳನ್ನು ಕೂಡ ಕರೆಸಿಕೊಂಡು ಮಾತುಕತೆ ನಡೆಸಿದರು.
ಸಾರ್ವಜನಿಕ ತೊಂದರೆಯಾಗದಂತೆ ರಸ್ತೆಯ ನಿರ್ಮಾಣದ ಭರವಸೆ ನೀಡಿದ ಬಳಿಕ ಇಲ್ಲಿನ ಗ್ರಾಮಸ್ಥರು ಸ್ಥಳದಿಂದ ತೆರಳಿದರು.