ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಪ್ರಕಾಶನ ವಿಭಾಗವು ಪ್ರಕಟಿಸಿರುವ ಉರ್ಬನ್ ಡಿಸೋಜ (ಉಬ್ಬ,ಮೂಡ್ ಬಿದ್ರಿ) ಅವರ ಕೊಂಕಣಿ ಸಣ್ಣ ಕಥಾ ಸಂಕಲನ ಬಿಡುಗಡೆ ಜ.೩೩ ರಂದು ಅಪರಾಹ್ನ ೩ ಗಂಟೆಗೆ ಕಾಲೇಜಿನ ‘ ಸಾನಿಧ್ಯ ‘ ಸಭಾಂಗಣದಲ್ಲಿ ನಡೆಯಿತು.
ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾ. ಮೆಲ್ವಿನ್ ಜೆ. ಪಿಂಟೋ ಎಸ್.ಜೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ’ಕಿಟಾಳ್’ ಜಾಲತಾಣದ ಸಂಪಾದಕ ಶ್ರೀ ಎಚ್ಚೆಮ್ ಪೆರ್ನಾಲ್, ಪ್ರಕಾಶನದ ನಿರ್ದೇಶಕಿ ಡಾ. ವಿದ್ಯಾ ವಿನುತ ಡಿಸೋಜ, ಹಾಗೂ ಲೇಖಕರ ಉಪಸ್ಥಿತಿಯಲ್ಲಿ ಕೇಂದ್ರೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ,ಕೊಂಕಣಿ ಕವಿ ಶ್ರೀ ಮೆಲ್ವಿನ್ ರೊಡ್ರಿಗಸ್ ಬಿಡುಗಡೆ ಮಾಡಿದರು.
ಬಿಡುಗಡೆ ಮಾಡಿ ಮಾತನಾಡಿದ ಕವಿ ಮೆಲ್ವಿನ್ “ಎಂಬತ್ತರ ದಶಕದಲ್ಲಿ ಹೆಚ್ಚು ಪ್ರಚಲಿತವಿದ್ದ ಸಣ್ಣ ಕಥೆಗಳ ಸಾಹಿತ್ಯ ಪ್ರಕಾರವನ್ನೇ ಆರಿಸಿದ ಉಬ್ಬ,ಅದನ್ನೇ ಈಗಲೂ ಮುಂದುವರೆಸಿಕೊಂಡು ಹೋಗಿದ್ದಾರೆ. ಹಣ್ಣಿನ ಗುಚ್ಚದಲ್ಲಿನ ಹಣ್ಣುಗಳು ಶಕ್ತಿ ಕೊಡುವಂತೆ, ಹಾಗೂ ಹೂಗಳ ಗುಚ್ಛದಲ್ಲಿನ ಹೂಗಳು ಪರಿಮಳ ಹರಡುವಂತೆ, ಇಲ್ಲಿನ ಕಥೆಗಳು ಕೊಂಕಣಿ ಸಾಹಿತ್ಯದ ಶಕ್ತಿಯಾಗಲಿ ಹಾಗೂ ಪರಿಮಳ ಹರಡಲಿ” ಎಂದು ಹೇಳಿ, ಸಂಕಲನದ ಶೀರ್ಷಿಕೆ “ಕಥೆಗಳ ಗುಚ್ಛ” (ಕಾಣ್ ಯಾಂಚೊ ಘೊಸ್ ) ಎಂಬ ಹೆಸರು ಸೂಕ್ತವಾಗಿದೆ “ಎಂದರು.
ಎಚ್ಚೆಮ್ ಪೆರ್ನಾಲ್ ಪುಸ್ತಕವನ್ನು ಪರಿಚಯಿಸಿದರು. “ಲೇಖಕ ಕಥನ ಮತ್ತು ಆತ್ಮಕಥನ ಶೈಲಿಯಲ್ಲಿ ಕಥೆಗಳನ್ನು ಬರೆದಿದ್ದಾರೆ. ಕಜೆಬೈಲ್ ಎಂಬ ಮಾದರಿ ಹಳ್ಳಿಯನ್ನೇ ಸಂಕೇತವಾಗಿ ಬಳಸಿ, ಅದರ ಪ್ರಗತಿ ಮತ್ತು ಅಲ್ಲಿ ಬೇಕಾಗುವ ಬದಲಾವಣೆಯ ಅಗತ್ಯವನ್ನು ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಂಶುಪಾಲರು ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿದರು. ಉಬ್ಬ ಮಾತನಾಡಿ ಕಥೆ ಬರೆಯಲು ಉತ್ತೇಜನ ನೀಡಿದ ತಾಯಿ, ಗೆಳೆಯರು ಮತ್ತು ಸಂಪಾದಕರನ್ನು ನೆನೆದು ಪ್ರಕಾಶನಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೆಕ್ಟರ್ ಫಾ. ಮೆಲ್ವಿನ್ ಪಿಂಟೋ ಮಾತನಾಡಿ “ಎಲ್ಲರಿಗೂ ಬರೆಯಲಾಗದು, ಬರೆಯುವುದು ಒಂದು ಪ್ರತಿಭೆ, ಬರೆವಣಿಗೆ ಮೂಲಕ ಸಮಾಜದಲ್ಲಿ ಒಳಿತನ್ನು ಮಾಡುವ ಶಕ್ತಿ ಲೇಖಕನಿಗೆ ಇದೆ. ಈ ಸಂಕಲನದ ಕಥೆಗಳನ್ನು ಓದಿ ವಿದ್ಯಾರ್ಥಿಗಳು ಸಾಹಿತ್ಯ ರಚಿಸುವಲ್ಲಿ ಆಸಕ್ತಿ ತೋರಿಸಬೇಕು” ಎಂದು ಕರೆ ಕೊಟ್ಟರು .
ಕುಮಾರಿ ಶರಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ರೋವಿನಾ ಡಿಸಿಲ್ವಾ ಪ್ರಾರ್ಥನೆ ಹಾಡಿದರು ಹಾಗೂ ಡಾ. ರೋಶನ್ ಡಿಸೋಜ ವಂದನೆ ಸಲ್ಲಿಸಿದರು.
ಪ್ರತಿಗಳಿಗೆ 9353859870 ನಂಬರಿಗೆ ಅಥವಾ [email protected] ಗೆ ಸಂಪರ್ಕ ಮಾಡಬಹುದು.