ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ – ಕರ್ನಾಟಕ ಸರ್ಕಾರದ ಶಿಕ್ಷಣ ಸುಧಾರಣೆಗಳು ಕಾರ್ಯಕ್ರಮದ ಅಡಿಯಲ್ಲಿ ಸಲಹೆಗಾರರು, ಶಿಕ್ಷಣ ಸುಧಾರಣೆಗಳು (ಸಂಪುಟ ದರ್ಜೆ ) – ಕರ್ನಾಟಕ ಸರ್ಕಾರ ಹಾಗೂ ಪಿ. ಇ. ಎಸ್. ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಪ್ರೊ. ಎಂ. ಆರ್. ದೊರೆಸ್ವಾಮಿ ಇವರ ಅಧಿಕೃತ ಭೇಟಿ ಮತ್ತು ‘ಪರಿಸರ-ಸ್ನೇಹಿ ಶಾಲೆಗಳು’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಪ್ರೊ. ದೊರೆಸ್ವಾಮಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಳಿದರು, “ಇಂದಿನ ಮಕ್ಕಳು ನಾಳಿನ ರಾಷ್ಟ್ರ ನಿರ್ಮಾತೃಗಳು. ಈ ಹಿನ್ನೆಲೆಯಲ್ಲಿ, ವಿಶೇಷವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಪ್ರಮುಖ ಪಾತ್ರವನ್ನು ಹೊಂದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಲ್ಲಿ ಯಾವುದೇ ಸೌಲಭ್ಯ ಅಥವಾ ಮೂಲಸೌಕರ್ಯದಿಂದ ವಂಚಿತರಾಗಬಾರದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದೊಂದಿಗೆ ಸಾರ್ವಜನಿಕರೂ ಸಹ ಸಹಕರಿಸಬೇಕು.
ವಿಶ್ವವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಳ ಪ್ರಮುಖ ಭಾಗವಾಗಿ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಅವುಗಳನ್ನು ಉನ್ನತಿಗೊಳಿಸಲು ಕಾರ್ಯೋನ್ಮುಖವಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಶಿಕ್ಷಣ ಸುಧಾರಣೆಗಳು ಅಡಿಯಲ್ಲಿ 2020 ರಿಂದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಎಂಬ ಯೋಜನೆಗೆ ರಾಷ್ಟ್ರದಲ್ಲೇ ಮೊದಲ ಬಾರಿಗೆ ಚಾಲನೆ ನೀಡಿದೆ. ಶಾಲಾ ದತ್ತು ಸ್ವೀಕಾರ ಕಾರ್ಯಕ್ರಮದ ಮೂಲಕ ಕನ್ನಡ ಮಾಧ್ಯಮ ಶಾಲೆಗಳನ್ನು ಇನ್ನಷ್ಟೂ ಅಭಿವೃದ್ಧಿಗೊಳಿಸಲು ಸರ್ಕಾರದ ಬಜೆಟ್ ಮಂಡನೆಯಲ್ಲಿ ವಿಶೇಷ ಪ್ಯಾಕೇಜ್ ಇಡಲು ಮತ್ತು ಅದನ್ನು ಅನುಷ್ಠಾನಗೊಳಿಸಲು ನಾನು ನನ್ನ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ”.