News Kannada
Tuesday, March 21 2023

ಮಂಗಳೂರು

ಉಜಿರೆ: ಸಂವೇದನೆಯಿಂದ ಸಾಹಿತ್ಯದ ಸೃಷ್ಟಿ- ಅರವಿಂದ ಚೊಕ್ಕಾಡಿ

Ujire: Creation of literature by sensibility- Aravind Chokkady
Photo Credit : News Kannada

ಉಜಿರೆ: ಸಂವೇದನಾಶೀಲತೆಯಿಲ್ಲದೆ ಸಾಹಿತ್ಯವಿಲ್ಲ. ವೇದನೆಗಳು ಸಾಹಿತ್ಯದಲ್ಲಿ ಸಂವೇದನೆಯನ್ನು ಸೃಷ್ಟಿ ಮಾಡುತ್ತವೆ. ಈ ಸಂವೇದನೆಗಳು ಸಾಹಿತ್ಯ ಹಾಗೂ ಕಾವ್ಯಗಳ ಸೃಷ್ಟಿ ಮಾಡುತ್ತವೆ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.

ಉಜಿರೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಮಟ್ಟದ 25ನೇ ಸಾಹಿತ್ಯ ಸಮ್ಮೇಳನದ ಎರಡನೇ ದಿನ ನಡೆದ ‘ಜಿಲ್ಲೆಯ ಸಾಹಿತ್ಯ ಪರಂಪರೆ’ ಕುರಿತ ಗೋಷ್ಠಿಯಲ್ಲಿ ಲೌಕಿಕ ಸಾಹಿತ್ಯದ ಕುರಿತು ಅವರು ಮಾತನಾಡಿದರು.

“ಸಾಹಿತ್ಯದಲ್ಲಿ ಸಂವೇದನಾಶೀಲತೆಯನ್ನು ನಾವು ಪರಂಪರೆಯ ಉದ್ದಕ್ಕೂ ಕಾಣಬಹುದು. ಮೊದಲೆಲ್ಲಾ ಈ ಸಂವೇದನಾಶೀಲತೆಯು ರಾಜಕೇಂದ್ರಿತವಾಗಿತ್ತು. ಮಾರ್ಕ್ಸ್ ವಾದ ಬಂದ ನಂತರ ಸಾಹಿತ್ಯವು ಜನಸಾಮಾನ್ಯರ ಸಂವೇದನಾಶೀಲತೆಗೆ ಒಳಪಟ್ಟಿತು” ಎಂದು ಅವರು ವಿಶ್ಲೇಷಿಸಿದರು.

ಧಾರ್ಮಿಕ ಸಾಹಿತ್ಯವೆಲ್ಲವೂ ಪಾರಮಾರ್ಥಿಕ ಸಾಹಿತ್ಯವಲ್ಲ. ಋಗ್ವೇದ ಸಾಹಿತ್ಯದಲ್ಲಿಯೂ ಪಾರಮಾರ್ಥಿಕ ಹಾಗೂ ಲೌಕಿಕ ಸಾಹಿತ್ಯ ಎರಡೂ ಅಡಕವಾಗಿವೆ. ಉದಾಹರಣೆಗೆ, ಗಂಡನನ್ನು ಕಳೆದುಕೊಂಡ ಮಹಿಳೆಯು ಚಿತೆ ಮುಂದೆ ಕೂತು ಅಳುವ ಸಂದರ್ಭ ಎದುರಾಗುತ್ತದೆ. ಆಗ ಬಂದ ಹಿರಿಯರೊಬ್ಬರು “ಮಕ್ಕಳು ಮನೆಯಲ್ಲಿದ್ದರೆ ಇಲ್ಲಿ ರೋದಿಸುವುದರ ಬದಲು ಮನೆಗೆ ಹೋಗಿ ಸಂಸಾರ ಆರಂಭಿಸು” ಎಂದು ಸಲಹೆ ನೀಡುತ್ತಾರೆ. ಇಲ್ಲಿ ಚಿತೆಯ ಮುಂದಿನ ಸನ್ನಿವೇಶವು ಪಾರಮಾರ್ಥಿಕವಾದರೆ, ಸಲಹೆಯು ಲೌಕಿಕವಾಗಿದೆ. ಇದೇ ರೀತಿ ಸಾಹಿತ್ಯದಲ್ಲಿನ ಎರಡೂ ಪ್ರಕಾರಗಳ ಸಮ್ಮಿಲನವನ್ನು ಕಾಣಬಹುದು. ಅದೇ ರೀತಿ ರತ್ನಾಕರವರ್ಣಿಯ ಭರತೇಶ ವೈಭವದಲ್ಲಿಯೂ ಈ ಗುರುತನ್ನು ಕಾಣಬಹುದು ಎಂದರು.

ಪಾರಮಾರ್ಥಿಕ ಸಾಹಿತ್ಯ ಹಾಗೂ ಲೌಕಿಕ ಸಾಹಿತ್ಯದಲ್ಲಿ ಯಾವುದೇ ಬೇಧವಿಲ್ಲ. ಈ ವಿಂಗಡಣೆಯನ್ನು ಅಧ್ಯಯನದ ಅನುಕೂಲಕ್ಕಾಗಿ ಮಾಡಿದ್ದಾದ್ದರಿಂದ ಅಧ್ಯಯನಕ್ಕೇ ಸೀಮಿತವಾಗಿರಬೇಕು. ಲೌಕಿಕ ಸಾಹಿತ್ಯವನ್ನು ಧಾರ್ಮಿಕ ಪರಿಕಲ್ಪನೆಯ ಮೂಲಕ ಹೇಳಲು ಎರಡು ಪ್ರಮುಖ ಆಯಾಮಗಳನ್ನು ಉಪಯೋಗಿಸಿಕೊಂಡಿದ್ದೇವೆ. ಯಕ್ಷಗಾನ ಸಾಹಿತ್ಯಗಳಲ್ಲಿ ಲೌಕಿಕವಾದದ್ದನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಹೇಳುವ ಪ್ರತೀತಿಯಿದೆ. ಅದೇ ರೀತಿ ದೈವಾರಾಧನೆ ನೆಲೆಗಳು ಕೂಡ ಲೌಕಿಕವಾದ್ದನ್ನು ಪರಿಣಾಮಕಾರಿಯಾಗಿ ಹೇಳುವ ಉದ್ದೇಶದಿಂದ ಧಾರ್ಮಿಕ ವಿನ್ಯಾಸದ ಮೂಲಕ ಹೇಗೆ ಪರಿಣಾಮಕಾರಿಯಾಗಿ ಹೇಳಬಹುದು ಎಂದು ತಿಳಿಸಿವೆ ಎಂದು ಅವರು ತಿಳಿಸಿದರು.

ಸಮಾಜಶಾಸ್ತ್ರ, ಸಾಹಿತ್ಯ, ವೈದ್ಯಕೀಯ ಸಾಹಿತ್ಯ, ಸ್ತ್ರೀವಾದಿ ಸಾಹಿತ್ಯ ಹೀಗೆ ಬಹುತೇಕ ಎಲ್ಲಾ ಪ್ರಕಾರಗಳಿಗೆ ತುಳುನಾಡು ಅದ್ಭುತವಾಗಿ ಸ್ಪಂದಿಸಿದೆ. ತುಳುನಾಡಿನವರು ಯಾವುದನ್ನೇ ಆಯ್ಕೆ ಮಾಡಿಕೊಂಡರೂ ತುಂಬಾ ತೀಕ್ಷ್ಣತೆಯಿಂದ ಕೆಲಸ ಮಾಡುತ್ತಾರೆ. ಇದಕ್ಕೆ ಇತಿಹಾಸದಲ್ಲಿಯೂ ಸಾಕಷ್ಟು ಉದಾಹರಣೆಗಳಿವೆ ಎಂದರು.

ಪಾರಮಾರ್ಥಿಕ ಸಾಹಿತ್ಯ

ಪಾರಮಾರ್ಥಿಕ ಸಾಹಿತ್ಯದ ಕುರಿತು ಮಾತನಾಡಿದ ಯಕ್ಷಗಾನ ಕಲಾವಿದ ತಾರಾನಾಥ ವರ್ಕಾಡಿ, ಕನ್ನಡ ಸಾಹಿತ್ಯಗಳೆಲ್ಲವೂ ಪಾರಮಾರ್ಥಿಕವಾದದ್ದು. ಆತ್ಮ ಮತ್ತು ಪರಮಾತ್ಮನನ್ನು ಪಾರಮಾರ್ಥಿಕ ಸಾಹಿತ್ಯ ಬೆಸೆಯುತ್ತದೆ. ಪಾರಮಾರ್ಥಿಕ ಸಂಬಂಧ ಲೌಕಿಕಕ್ಕಿದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯ ಸಾಹಿತ್ಯ ಪರಂಪರೆ ಒಂದೇ ಕೇಂದ್ರದಿಂದ ಹೊರಟ ತ್ರಿಜ್ಯದಂತೆ. ಇದರ ಉದ್ದೇಶ ಲೋಕಕ್ಕೆ ಒಳಿತು ಮಾಡುವುದು. ಲೌಕಿಕದ ಜೊತೆ ಪಾರಮಾರ್ಥವನ್ನೂ ಅಭ್ಯಾಸ ಮಾಡುವ ಆವಶ್ಯಕತೆ ಇದೆ. ನೈತಿಕತೆಯ ಆವರಣವಿಲ್ಲದಿದ್ದರೆ ಅದು ನಾಶ ಎಂಬುದು ಪಾರಮಾರ್ಥಿಕತೆಯ ಸಾರಾಂಶ. ತರ್ಕಬುದ್ಧಿ, ಸೃಜನಶೀಲತೆ ಮತ್ತು ಪ್ರತಿಭೆಯಿಂದ ವ್ಯಾಖ್ಯಾನ ಮಾಡುತ್ತಾ ಪಾರಮಾರ್ಥವನ್ನು ಬೆಳೆಸಲಾಗಿದೆ ಎಂದು ಅವರು ತಿಳಿಸಿದರು.

See also  ಬೆಂಗಳೂರು: ಪುಣ್ಯಕೋಟಿ ಯೋಜನೆಗೆ ದೇಣಿಗೆ ನೀಡಲಿರುವ ಸರ್ಕಾರಿ ನೌಕರರು!

ಕುವೆಂಪುರವರ ಕಥೆ, ಕಾದಂಬರಿಗಳು ಕೇವಲ ಮನರಂಜನೆಗಳಲ್ಲ, ಅದು ದರ್ಶನವಾಗಬೇಕು. ಜಡಗಳಿಗೆ ಚೈತನ್ಯವನ್ನು ಆರೋಪಿಸಿ ಸಾಹಿತ್ಯ ಸೃಷ್ಟಿಯಾಗಬೇಕು. ಸಾಹಿತ್ಯಗಳು ಸಮಾಜವನ್ನು ಮೇಲೆತ್ತುವಲ್ಲಿ ಸಹಾಯವಾಗುತ್ತದೆ. ಆತ್ಮ ಮತ್ತು ಪರಮಾತ್ಮನಲ್ಲಿ ಸೇತುವೆಯಾಗಿರುವುದೇ ಪಾರಮಾರ್ಥಿಕ ಸಾಹಿತ್ಯ ಎಂದು ಹೇಳುತ್ತಾರೆ. ಪುರಾಣ ಸಾಹಿತ್ಯ ಎಂಬುವುದು ಅತ್ಯಂತ ಅದ್ಭುತ ಸಾಹಿತ್ಯ, ಇಲ್ಲಿ ನಿಜವಾದ ಪಾರಮಾರ್ಥಿಕ ಸಾಹಿತ್ಯ ಸೃಷ್ಟಿಯಾಯಿತು. ಲೌಕಿಕದ ಅನುಭವಗಳನ್ನು ಅನುಭವಿಸುತ್ತಾ ಪರಲೋಕಕ್ಕೆ ಸೇರಬೇಕು. ಲೌಕಿಕದಲ್ಲಿ ಪಾರಮಾರ್ಥಿಕ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಮನಸ್ಸು ಅತೀ ಸೂಕ್ಷ್ಮವಾದ ಕಾರಣ ಹಲವಾರು ನಂಬಿಕೆಗಳು ಬೇಕು. ವಸ್ತುಸತ್ಯವೇ ಪೂರ್ಣಸತ್ಯವಲ್ಲ. ಭಾವಸತ್ಯವನ್ನೂ ಕಾಣಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಂಪ್ಯೂಟರ್ ತಜ್ಞ ನಾಡೋಜ ಕೆ.ಪಿ. ರಾವ್ ಮಾತನಾಡಿ, ಭಾಷೆ ಹರಿಯುವ ನೀರು ಇದ್ದ ಹಾಗೆ. ಇದಕ್ಕೆ ಯಾವುದೇ ರೀತಿಯ ಭೇದಭಾವ ಇಲ್ಲ. ಭಾಷೆಗೆ ಯಾವುದೆ ಮಿತಿಗಳಿಲ್ಲ, ಭಾಷೆಗೆ ಬೇಕಾಗಿರುವುದು ಅಭಿಮಾನ ತುಂಬಿದ ಅಂತಃಕರಣದ ತುಡಿತ. ಸತ್ಯ ಒಂದು; ಅಸತ್ಯ ನೂರಾರು. ಸಾಹಿತ್ಯಕ್ಕೆ ಯಾವುದೇ ಚೌಕಟ್ಟು ಇಲ್ಲ. ಭಾಷೆಯನ್ನು ಸತ್ಯದ ಜೊತೆಗೆ ನಡೆಸುವಾಗ ಸಾಹಿತ್ಯಕ್ಕೆ ಪರಿಪೂರ್ಣತೆ ಬರುತ್ತದೆ ಎಂದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಕಡಬ ಕ.ಸಾ.ಪ. ಅಧ್ಯಕ್ಷ ಶೇಷಪ್ಪ ರೈ ಸ್ವಾಗತಿಸಿ, ಬೆಳ್ತಂಗಡಿ ಕ.ಸಾ.ಪ. ಗೌರವ ಕರ‍್ಯದರ್ಶಿ ಪ್ರಮೀಳಾ ವಂದಿಸಿದರು. ಡಾ. ನಾಗಣ್ಣ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು