ಉಜಿರೆ: ಸಾಹಿತ್ಯದಷ್ಟೇ,ಅದಕ್ಕೆ ಓದುಗರು,ವಿಮರ್ಶಕರು ಮುಖ್ಯ.ಸಾಹಿತ್ಯ ರಚನೆಯಿಂದಲೆ ಬದುಕು ರೂಪಿಸಿಕೊಂಡವರು ಇದ್ದಾರೆ.ಹ್ಯಾರಿ ಪಾಟರ್ ರಂತಹ ಬರಹಗಾರರು ಅವರ ಬರಹಗಳಿಂದ ವಿಶ್ವ ವಿಖ್ಯಾತ ರಾಗಿದ್ದಾರೆ.ಓದುಗರೇ ಅವರನ್ನು ರೂಪಿಸಿದ್ದಾರೆ.ಆಕರ್ಷಕ ಪುಸ್ತಕಗಳು ಹೆಚ್ಚಿನ ಓದುಗರನ್ನು ಸೆಳೆಯುತ್ತವೆ.ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುವ ಇನ್ನಷ್ಟು ಪುಸ್ತಕಗಳು ಮೂಡಿ ಬರಲಿ ಎಂದು ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಉಜಿರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೆಚ್ಚೆಚ್ಚು ಸಮ್ಮೇಳನಗಳು ನಡೆದಾಗ ಅದರ ಆಶಯ ನೇರವಾಗಿ ಓದುಗರನ್ನು,ವಿದ್ಯಾರ್ಥಿಗಳನ್ನು ತಲುಪುತ್ತದೆ.ಸಾಹಿತಿಗಳು ಸಾಹಿತ್ಯವನ್ನು,ಸಾಹಿತ್ಯವು ಸಾಹಿತಿಗಳನ್ನು ಬೆಳೆಸುತ್ತಿದೆ.ನೀರಿನ ಒಂದೊಂದು ಹನಿ ಮಡಕೆಯನ್ನು ತುಂಬುವಂತೆ ಸಣ್ಣ ಸಣ್ಣ ವಿಚಾರಗಳನ್ನು ಓದಿನ ಮೂಲಕ ಸಂಗ್ರಹಿಸಿ ಪ್ರಬುದ್ದರಾಗ ಬೇಕು.ಎಲ್ಲರಲ್ಲೂ ಗ್ರಂಥಾಲಯ ಬಳಕೆಯ ಆಸಕ್ತಿ ಹೆಚ್ಚಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ಮುಂಬಯಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ತಾಳ್ತಜೆ ವಸಂತ ಕುಮಾರ್ ಮಾತನಾಡಿ ರಾಜ್ಯದ ಹೊಸಹಳ್ಳಿ ಗಮಕ ಗ್ರಾಮ,ರುದ್ರಪಟ್ಟಣ ಸಂಗೀತ ಗ್ರಾಮ,ಮತ್ತೂರು ಸಂಸ್ಕೃತ ಗ್ರಾಮ ಎಂದು ಕರೆಯಲ್ಪಡುವಂತೆ ಉಜಿರೆಯನ್ನು ಸಂಸ್ಕೃತಿ ಗ್ರಾಮ ಎಂದು ಕರೆಯ ಬೇಕು.ಇಲ್ಲಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ.ಕರಾವಳಿಯಲ್ಲಿ ಪರಿಶುದ್ಧವಾದ ಭಾಷಾ ಸೌಷ್ಟವ ಇದೆ.ಇದು ಕನ್ನಡದ ಭದ್ರ ತಳಹದಿಯಾಗಿದೆ.ಕೋಮಲವಾದ ಕನ್ನಡ ಭಾಷೆಯನ್ನು ಜಗ್ಗದೆ,ಯೋಚಿಸಿ ಬಳಸಬೇಕು.ಮನೆ ಮನೆಗಳಲ್ಲೂ ಕನ್ನಡ ಪದಗಳು ಬಳಕೆಯಾಗಲಿ ಎಂದರು.
ಇತರ ಭಾಷೆ ನಮ್ಮ ಭಾಷೆಯನ್ನು ಆಕ್ರಮಿಸ ಬಾರದು-ಹೇಮಾವತಿ ವೀ.ಹೆಗ್ಗಡೆ
ಸಮ್ಮೇಳನದ ಅಧ್ಯಕ್ಷರಾದ ಹೇಮಾವತಿ ವೀ.ಹೆಗ್ಗಡೆ ಮಾತನಾಡಿ, ಕನ್ನಡ ಶಾಲೆಗಳು ಬಲ ಗೊಂಡರೆ,ನಮ್ಮ ನಾಡಿನ ಸಂರಕ್ಷಣೆ ಯಾಗುತ್ತದೆ.ಎಲ್ಲಾ ಭಾಷೆಗಳ ಜ್ಞಾನ ಇರಬೇಕು.ಆದರೆ ಆ ಭಾಷೆಗಳು ನಮ್ಮ ಭಾಷೆಯನ್ನು ಆಕ್ರಮಿಸಬಾರದು.ರಾಜ್ಯದ ಎಲ್ಲಾ ಚಟುವಟಿಕೆಗಳು ಕನ್ನಡದಲ್ಲೇ ನಡೆಯಬೇಕು.ಸಾಹಿತ್ಯದ ಸವಿ ಸವಿಯಲು ದೇಶಿ ಪರಂಪರೆ ಅನುಸರಿಸಬೇಕು.
ತುಳು ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ ಮುಂದಿನ ಜನಾಂಗ ಅನುಸರಿಸಿ ಭವಿಷ್ಯ ರೂಪಿಸಲು ತುಳುವಿನ ಸಮಗ್ರ ಅಭಿವೃದ್ಧಿಗೆ ಸರಕಾರ ಗಂಭೀರವಾಗಿ ಪರಿಗಣಿಸಿ ಶೈಕ್ಷಣಿಕ ಸ್ಥಾನಮಾನ ಲಭಿಸುವಂತೆ ಎಲ್ಲ ಪ್ರಯತ್ನ ನಡೆಯ ಬೇಕು. ಸಮ್ಮೇಳನದ ಯಶಸ್ಸಿಗೆ ಸಾಹಿತಿಗಳಷ್ಟೇ ಸಹೃದಯರು ಮುಖ್ಯ.ಸಾಹಿತ್ಯ- ಸಾಮರಸ್ಯ-ಸಮೃದ್ಧಿ ಎಂಬ ಸಮ್ಮೇಳನದ ಆಶಯ ನೆರವೇರಿದೆ.ಅನೇಕ ಕವಿ,ಸಾಹಿತಿ,ವಿಚಾರ ವಂತರಿಗೆ ಮನ್ನಣೆ ದೊರಕಿದೆ ಎಂದರು.
ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಕರ್ನಾಟಕ ಬ್ಯಾಂಕ್ ಸಿಇಒ ಮಹಾಬಲೇಶ್ವರ ಎಂ.ಎಸ್ ಉಪಸ್ಥಿತರಿದ್ದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ಹೇಮಾವತಿ ವೀ. ಹೆಗ್ಗಡೆಯವರನ್ನು ಕಸಾಪವತಿಯಿಂದ ಗೌರವಿಸಲಾಯಿತು.
ಡಾ.ಚಿದಾನಂದ ಕೆ.ವಿ. (ವೈದ್ಯಕೀಯ ಸೇವೆ),ಎಡ್ವರ್ಡ್ ಡಿಸೋಜಾ (ನಿವೃತ್ತ ಯೋಧ),ಡಾ.ಶ್ರೀಪತಿ ರಾವ್(ವೈದ್ಯಕೀಯ),ನಾಭಿರಾಜ ಪೂವಣಿ (ಪತ್ರಕರ್ತ),ಅಬೂಬಕ್ಕರ್ ಕೈರಂಗಳ (ಸಾಹಿತ್ಯ),ಮಧೂರು ಮೋಹನ ಕಲ್ಲೂರಾಯ (ಗಮಕ),ಕಮಲಾ ಭಟ್ (ಭರತ ನಾಟ್ಯ), ತನಿಯಪ್ಪ ಕುಕ್ಕೆಜಾಲು (ದೈವಾರಾಧನೆ),ಚೈತನ್ಯ ಕಲ್ಯಾಣತ್ತಾಯ(ಜೋತಿಷ್ಯ)ಅಣ್ಣಯ್ಯ ಕುಲಾಲ್,(ಸಹಕಾರ) (ಜ್ಯೋತಿಷ್ಯ),ಅದ್ವೈತ್ ಕನ್ಯಾನ (ಚಂಡೆ ವಾದನ),ಗುರುವಪ್ಪ (ಪತ್ರಿಕೋದ್ಯಮ) ಹಾಗೂ ಸುಳ್ಯದ ಶ್ರೀರಂಗಮನೆ ಸಂಸ್ಥೆ ಪರವಾಗಿ ಜೀವನ್ ರಾಂ ಸುಳ್ಯ,ಇವರನ್ನು ಸನ್ಮಾನಿಸಲಾಯಿತು.
ಸಂಯೋಜನಾ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಕಸಾಪ ರಾಜ್ಯ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ,ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ,ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ. ಮತ್ತಿತರರು ಇದ್ದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ ಸ್ವಾಗತಿಸಿದರು.ಸಂಯೋಜನಾ ಸಮಿತಿ ಪ್ರ.ಕಾರ್ಯದರ್ಶಿ ರಾಮಕೃಷ್ಣ ಭಟ್ ವಂದಿಸಿದರು. ಶಿಕ್ಷಕರಾದ ದೇವುದಾಸ್ ನಾಯಕ್ ಹಾಗೂ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.