ಉಜಿರೆ: ರಾಜ್ಯದಲ್ಲಿನ ಸಾಂಸ್ಕೃತಿಕ ಚಿಂತಕರು ಗುರುತಿಸಿರುವ ಹೊಸಹಳ್ಳಿ ಗಮಕ ಗ್ರಾಮ, ರುದ್ರಪಟ್ಟಣ ಸಂಗೀತ ಗ್ರಾಮ, ಮತ್ತೂರು ಸಂಗೀತ ಗ್ರಾಮ ಎಂಬಂತೆ ಉಜಿರೆಯನ್ನು ಸಾಂಸ್ಕೃತಿಕ ಗ್ರಾಮ ಎಂದು ಕರೆಯಬೇಕು ಎಂದು ಮುಂಬಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ತಾಳ್ತಜೆ ವಸಂತ ಕುಮಾರ್ ಅಭಿಪ್ರಾಯಪಟ್ಟರು.
ಉಜಿರೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತೆ ನಡೆಯುತ್ತಿರುವ ಸಮ್ಮೇಳನಗಳಿಂದ ಭಾಷೆ ಉನ್ನತಿಯನ್ನು ಹೊಂದುತ್ತಿದೆ ಎಂದರು.
ಕರಾವಳಿ ಭಾಗದಲ್ಲಿ ಪರಿಶುದ್ಧ ಭಾಷಾಸೌಷ್ಠವವನ್ನು ಕಾಣಬಹುದು. ಇವುಗಳು ಭಾಷೆಯ ತಳಹದಿಯನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾಷಾ ಜ್ಞಾನ ಬೆಳೆಸುವಲ್ಲಿ ಕೃತಿಗಳು, ಸಾಹಿತ್ಯಗಳು ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತಿವೆ. ಅಜ್ಞಾತ ಜಗತ್ತು, ಪರಿಚಿತವಲ್ಲದಂತಹ ವಿಷಯಗಳನ್ನು ಸಾರಾ ಅಬೂಬಕ್ಕರ್ ಮತ್ತು ಬೊಳುವಾರ್ ಕೃತಿಗಳ ಮೂಲಕ ಕಾಣಲು ಸಾಧ್ಯವಾಗುತ್ತದೆ ಎಂದರು.
ಭಾಷೆ ಎಂಬುದು ಕೋಮಲವಾದದ್ದು. ಬಳಸುವಾಗ ಎಚ್ಚರದಿಂದಿರಬೇಕು. ಕನ್ನಡ ಪದಗಳ ಬದಲಿಗೆ ಆಂಗ್ಲ ಪದಗಳನ್ನು ಬಳಸುವುದರಿಂದ ಭಾಷೆಯ ಉಳಿವು ಸಾಧ್ಯವಿಲ್ಲ. ಮಕ್ಕಳಿಗೆ ಭಾಷಾಸಂಸ್ಕೃತಿಯನ್ನು ಕಲಿಸುವಲ್ಲಿ ಪೋಷಕರು ಎಡವುತ್ತಿದ್ದಾರೆ. ಮಕ್ಕಳ ಮುಂದೆ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಮಕ್ಕಳು ಕನ್ನಡ ಭಾಷೆ ಕಲಿಯುವಲ್ಲಿ, ಜೊತೆಗೆ ಭಾಷೆಯನ್ನು ಉಳಿಸುವಲ್ಲಿಯೂ ಸಹಕಾರಿಯಾಗುತ್ತದೆ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು. ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ವರದಿ: ವಿಜಯ ಕುಮಾರ್ ಹಿರೇಮಠ