ಮಂಗಳೂರು: ಸಿಟಿ ಗ್ರೂಪ್ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ವಾಂತಿ, ಬೇಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.6ರಂದು ಸಾಯಂಕಾಲ 4.30ಕ್ಕೆ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಮಾಹಿತಿ ದೊರೆತಿದ್ದು, ಬಿಎಸ್‌ಸಿ ಹಾಗೂ ಜನರಲ್ ನರ್ಸಿಂಗ್‌ನ ಕೆಲ ವಿದ್ಯಾರ್ಥಿಗಳಲ್ಲಿ ವಾಂತಿ, ಬೇಧಿ ಪ್ರಕರಣ ಕಂಡುಬಂದಿತ್ತು. ಕೂಡಲೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಭೇಟಿ ನೀಡಿ ವಿದ್ಯಾರ್ಥಿನಿಯರನ್ನು ಪರೀಕ್ಷೆ ನಡೆಸಿದ್ದಾರೆ.
ಈ ವೇಳೆ ಆಸ್ಪತ್ರೆಗೆ ದಾಖಲು ಮಾಡುವಂತಹ ರೋಗ ಲಕ್ಷಣ ಕಂಡುಬಂದಿಲ್ಲ. ಆದರೆ ರಾತ್ರಿ 9 ರಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಲ್ಲಿ ವಾಂತಿ ಬೇಧಿ ಲಕ್ಷಣ ಕಂಡುಬಂದಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಆರೋಗ್ಯ ವಿಚಾರಿಸಲಾಗಿದೆ. ಬಳಿಕ ವಿವಿಧ ಆಸ್ಪತ್ರೆಯ ತಜ್ಞ ವೈದ್ಯರೊಂದಿಗೆ ಆರೋಗ್ಯ ಕುರಿತು ನಿರಂತರ ಸಂವಹನ ನಡೆಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಭಯಗೊಂಡಿರುವುದು, ನಿರ್ಜಲಿಕರಣ ಸ್ಥಿತಿ ತಲುಪಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ನಂತರ ವಿದ್ಯಾರ್ಥಿಗಳು ವಾಸವಾಗಿದ್ದ ವಸತಿ ನಿಲಯಕ್ಕೆ ತೆರಳಿ ಆಂಬುಲೆನ್ಸ್ ಕಳುಹಿಸಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆಹಾರ ಸುರಕ್ಷತಾಧಿಕಾರಿ ನೇತೃತ್ವದಲ್ಲಿ ವಸತಿ ನಿಲಯದ ಆಹಾರ ತಯಾರಿಕಾ ಕೊಠಡಿಯಲ್ಲಿದ್ದ ಅಡುಗೆ, ನೀರಿನ ಮಾದರಿ, ಮಾಂಸ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಲಾಯಿತು. ಸ್ಥಳದಲ್ಲಿ ಅಡುಗೆ ತಯಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಯಿತು.
ಮಂಗಳವಾರ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿದ್ದು, 13 ವಿದ್ಯಾರ್ಥಿನಿಯರು ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವುದು ಕಂಡುಬಂತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಮಧ್ಯೆ ಯಾವುದೇ ವಿದ್ಯಾರ್ಥಿಗಳು ಊರಿಗೆ ತೆರಳದಂತೆ ಸೂಚಿಸಲಾಗಿದ್ದು, ಜಿಲ್ಲಾ ಸರ್ವೇಕ್ಷಣಾ ಘಟಕ ತಜ್ಞರ ತಂಡವನ್ನು ವಸತಿ ನಿಲಯಕ್ಕೆ ಕಳುಹಿಸಿ ಮಲ, ನೀರು, ರಕ್ತ ಮಾದರಿ ಸಂಗ್ರಹಿಸಿ ವಿವಿಧ ಆಯಾಮಗಳಲ್ಲಿ ಸೋಂಕಿಗೆ ಕಾರಣ ಹುಡುಕಲಾಗುತ್ತಿದೆ,
ವಿಷಪೂರಿತ ಆಹಾರ ಸೇವನೆಯಿಂದ ಘಟನೆ ಉಂಟಾಗಿರಬಹುದೆಂದು ಶಂಕಿಸಲಾಗಿದ್ದು, ಪ್ರಯೋಗಾಲಯ ವರದಿ ನಿರೀಕ್ಷಿಸಲಾಗುತ್ತಿದೆ.