ಮಂಗಳೂರು: ತಮ್ಮ ಉದ್ಯಮದ ಲಾಭದ ಸಿಂಹಪಾಲನ್ನು ಸಮಾಜಸೇವೆಯಲ್ಲಿ ತೊಡಗಿಸಿ ಅಸಹಾಯಕರ, ನಿರ್ಗತಿಕರ, ರೋಗಿಗಳ ಕಣ್ಣೊರೆಸುವ ಮೂಲಕ ದೇವರು ಮೆಚ್ಚುವ ಕಾರ್ಯದಲ್ಲಿ ಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ಮಹಾರಾಷ್ಟ್ರದ ವಾಶಿಯ ಡಾ. ದೀಪಕ್ ಶೆಣೈ ಅವರಿಗೆ ಜಿಪಿಎಲ್ ವರ್ಷದ ವ್ಯಕ್ತಿ 2023 ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಬಡ ಮತ್ತು ಮದ್ಯಮ ವರ್ಗದವರ ಬದುಕಿನ ಮುಖ್ಯ ಸವಾಲಾಗಿರುವ ಆರೋಗ್ಯದ ಕಾಳಜಿಯನ್ನು ಹೊಂದಿರುವ ಡಾ. ದೀಪಕ್ ಶೆಣೈ ಅವರು ಸುಮಾರು 2000 ಕ್ಕೂ ಮಿಕ್ಕಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರತಿ ಕುಟುಂಬಕ್ಕೆ 50000 ರೂಪಾಯಿ ಇನ್ಸೂರೆನ್ಸ್ ಮಾಡಿಸಿದ್ದಾರೆ. ಜಿಎಸ್ ಬಿ ಸಮುದಾಯದ ಏಕತೆ ಮತ್ತು ಯುವ ವರ್ಗದವರ ಅಭ್ಯುದಯಕ್ಕಾಗಿ ಅರ್ಹನಿಶಿ ಚಿಂತಿಸಿ ಕಾರ್ಯಪ್ರವೃತ್ತರಾಗುವ ಡಾ. ದೀಪಕ್ ಶೆಣೈ ಅದಕ್ಕಾಗಿ ಯಥೇಚ್ಚ ರೀತಿಯಲ್ಲಿ ತಮ್ಮ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ.
ಈಗಿನ ತಲೆಮಾರು ಧಾರ್ಮಿಕ ಶ್ರದ್ಧೆಯಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಸಂದಿಗ್ಧ ಪರಿಸ್ಥಿತಿಯಲ್ಲಿ ತಾವು ಸ್ವತ: ಸಮಾಜದ ಗುರುವರ್ಯರ ಎಲ್ಲಾ ಕಾರ್ಯಕ್ರಮಗಳಲ್ಲಿ ತನು, ಮನ, ಧನದಿಂದ ಪಾಲ್ಗೊಳ್ಳುವುದು ಮಾತ್ರವಲ್ಲ, ಅಸಂಖ್ಯಾತ ಯುವಕರನ್ನು ಕೂಡ ಇದರಲ್ಲಿ ಭಾಗಿಯಾಗುವಂತೆ ಮಾಡುವಲ್ಲಿ ಅವರ ಶ್ರೇಷ್ಟ ಯೋಗದಾನವಿದೆ. ಅನೇಕ ದೇವಳಗಳಿಗೆ ನೆರವು, ಕಾರ್ಯಕ್ರಮಗಳಿಗೆ ಸಹಕಾರ, ಉತ್ಸವಗಳಿಗೆ ಕೊಡುಗೆ ನೀಡುವಲ್ಲಿ ದೀಪಕ್ ಶೆಣೈ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾದ 48 ಗಂಟೆಯೊಳಗೆ ಅಸಂಖ್ಯಾತ ನಿರ್ಗತಿಕ ಕುಟುಂಬಗಳಿಗೆ ಉಚಿತವಾಗಿ ರೇಶನ್ ಪೂರೈಕೆ, ಕೋವಿಡ್ ಅವಧಿಯಲ್ಲಿ ಲಸಿಕೆಗಳ ಕೊರತೆ ಆಗದಂತೆ ಕ್ರಮ, ಮಹಾರಾಷ್ಟ್ರದ ಅನೇಕ ಶಾಲೆಗಳ ಮಕ್ಕಳಿಗೆ ತಮ್ಮ ಟ್ರಸ್ಟ್ ನಿಂದ ಮದ್ಯಾಹ್ನದ ಬಿಸಿಯೂಟ, ಮನೆ ಇಲ್ಲದವರಿಗೆ ಮನೆ ಕಟ್ಟಲು ಸಹಾಯ ಹೀಗೆ ಅನೇಕ ರೀತಿಯಲ್ಲಿ ಜನೋಪಕಾರಿ ಸೇವೆಯಲ್ಲಿ ಡಾ. ದೀಪಕ್ ಶೆಣೈ ನಿರತರಾಗಿದ್ದಾರೆ. ಅವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಳನ್ನು ಪರಿಗಣಿಸಿ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಜಿಪಿಎಲ್ 2023 ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಡಾ. ದೀಪಕ್ ಶೆಣೈ ಅವರಿಗೆ ನೀಡಲು ಹೆಮ್ಮೆ ಪಡುತ್ತದೆ.
ಚೆನೈ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವೀಧರರಾಗಿರುವ ಡಾ. ದೀಪಕ್ ಶೆಣೈ ಅವರ ಉದ್ಯಮಶೀಲತೆಯ ಸಾಮರ್ಥ್ಯ ಗುರುತಿಸಿ ಎಪಿಜೆ ಅಬ್ದುಲ್ ಕಲಾಂ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಗೌರವ ಪ್ರೋಫೆಸರ್ ಜವಾಬ್ದಾರಿಯೂ ಇವರ ಮುಡಿಗೇರಿದೆ. ದೇಶ, ವಿದೇಶಗಳ ಅನೇಕ ಔಷಧ ತಯಾರಿಕಾ ಕಂಪೆನಿಗಳು, ಕಾರ್ಪೋರೇಟ್ ಕಂಪೆನಿಗಳು, ಆರ್ಥಿಕ ವ್ಯವಹಾರಗಳ ಉದ್ಯಮಗಳು ತಮ್ಮ ಸಂಸ್ಥೆಯ ನಿರ್ದೇಶಕರನ್ನಾಗಿ, ಸಲಹೆಗಾರರನ್ನಾಗಿ ಡಾ. ದೀಪಕ್ ಶೆಣೈ ಅವರ ಎರಡು ದಶಕಗಳ ಅಪಾರ ಅನುಭವವನ್ನು ಬಳಸಿಕೊಂಡು ಬೆಳೆದಿವೆ. ಮಾನವೀಯ ಹೃದಯದ ಡಾ. ದೀಪಕ್ ಶೆಣೈಯವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವ್ಯಕ್ತಿಯಾಗಿರುವುದು ಸಮುದಾಯಕ್ಕೂ ಹೆಮ್ಮೆಯಾಗಿರುವುದರಿಂದ ಅವರನ್ನು ಫೆಬ್ರವರಿ 10, 11, 12 ರಂದು ಮೂರು ದಿನಗಳ ತನಕ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆಯುವ ಜಿಪಿಎಲ್ ಉತ್ಸವದ 2 ನೇ ದಿನ ಅವರಿಗೆ ವಿಶೇಷ ಭವ್ಯ ವೇದಿಕೆಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲು ಆಯೋಜಕರು ತೀರ್ಮಾನಿಸಿದ್ದಾರೆ.