ಮಂಗಳೂರು: ನಾರಾಯಣ ಗುರು ಹೆಸರಲ್ಲಿ ಬಿಲ್ಲವರನ್ನು ಒಡೆಯಲು ಷಡ್ಯಂತ್ರ ನಡೆಸುತ್ತಿದ್ದಾರೆ, ಆಮೂಲಕ ಕಾಂಗ್ರೆಸ್ ಟಿಕೆಟ್
ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಯಾರು ಕೂಡ ನಾರಾಯಣ ಗುರು ಹೆಸರಲ್ಲಿ ರಾಜಕೀಯ ಮಾಡಬೇಡಿ. ಅವರು ಒಂದು ಜಾತಿಗೆ ಸೀಮಿತರಲ್ಲ. ನೀವು ಯಾವ ಪಕ್ಷದಲ್ಲಿ ಬೇಕಾದರೂ ಸ್ಪರ್ಧೆ ಮಾಡಿ ಎಂದು ಕಿಯೋನಿಕ್ಸ್ ಅಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಹಿಂದೆ ಯಾವ ಸರಕಾರ ಇದ್ದಾಗಲೂ ನಾರಾಯಣ ಗುರು ಅಭಿವೃದ್ಧಿ ನಿಗಮ ಮಾಡಿಲ್ಲ. ನಮ್ಮ ಬಿಜೆಪಿ ಸರಕಾರ ಈ ಕೆಲಸ ಮಾಡಿದೆ. ಅದಕ್ಕಾಗಿ ಅಭಿನಂದಿಸುತ್ತೇನೆ. ಆದರೆ ತಮ್ಮದೇ ಹೋರಾಟದಿಂದ ನಿಗಮ ಆಯ್ತು ಎನ್ನುವ ಇವರ ಮಾತನ್ನು ಒಪ್ಪುವುದಿಲ್ಲ. ಆರು ತಿಂಗಳ ಹಿಂದೆಯೇ ಈ ಬಗ್ಗೆ ಪ್ರಕ್ರಿಯೆ ಆಗಿತ್ತು. ಇದಕ್ಕೆ ಬಿಲ್ಲವ, ಈಡಿಗ ಮುಖಂಡರಾದ ವೇದಕುಮಾರ್, ನವೀನ್ ಸುವರ್ಣ, ಪ್ರಣವಾನಂದ ಸ್ವಾಮೀಜಿ ಸೇರಿ ಹಲವರು ಕೆಲಸ ಮಾಡಿದ್ದಾರೆ, ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಅವರೂ ಒತ್ತಡ ಹೇರಿದ್ದಾರೆ. ಈಗ ನಾರಾಯಣ ಗುರು ನಿಗಮ ಮಾಡಿದ್ದು ಯಾವುದೇ ರಾಜಕೀಯ ಕಾರಣಕ್ಕೆ ಅಲ್ಲ ಎಂದರು.
ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದಾಗ ಆರ್ಯ ಈಡಿಗ ವಿಭಾಗದ ಮುಖಂಡ ಜೆಪಿ ನಾರಾಯಣ ಸ್ವಾಮಿ ಭಾರೀ ಪ್ರಯತ್ನ ಮಾಡಿದ್ದರು. ಅದರೂ ಅವರಿಗೆ ಆಪ್ತರಾಗಿದ್ದ ಸಿದ್ದರಾಮಯ್ಯ ನಿಗಮಕ್ಕೆ ಒಪ್ಪಿಗೆ ನೀಡಿಲ್ಲ ಎಂದ ಹರಿಕೃಷ್ಣ ಬಂಟ್ವಾಳ್, ಈಗ ನಿಗಮ ಘೋಷಣೆ ಮಾಡಿದವರಿಗೆ ಅನುದಾನ ಕೊಡಲು ತಾಕತ್ತು ಇಲ್ಲವೇ? ಅನುದಾನ ಕೊಟ್ಟಿಲ್ಲ ಎಂದು ಗುಲ್ಲೆಬ್ಬಿಸುವುದು ಯಾಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಾರಾಯಣ ಗುರು ವಸತಿ ಶಾಲೆಯನ್ನು ಆರಂಭಿಸಿದ್ದು ಬಿಜೆಪಿ ಸರಕಾರ ಬಂದ ಬಳಿಕವೇ ಉಡುಪಿಯಲ್ಲಿ ಕೋಟಿ ಚೆನ್ನಯ ಸೈನಿಕ ತರಬೇತಿ ಶಾಲೆ ಮಾಡಿದ್ದೂ ಬಿಜೆಪಿ ಸರಕಾರವೇ.. ಪುತ್ತೂರಿನಲ್ಲಿ ಕೋಟಿ ಚೆನ್ನಯ ಎಂದು ಬಸ್ ನಿಲ್ದಾಣಕ್ಕೆ ಹೆಸರಿಟ್ಟಿದ್ದೂ ಬಿಜೆಪಿ ಸರಕಾರದಲ್ಲಿಯೇ. ಮಂಗಳೂರಿನಲ್ಲಿ ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರು ಹೆಸರು ಮಾಡಿದ್ದೂ ನಾವೇ. ಕಾಂಗ್ರೆಸ್ ಸರಕಾರ ಇದ್ದಾಗ ಮಾಡಿದ್ದಾರೆಯೇ ಎಂದು ಕೇಳಿದರು.