ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಡಬಲ್ ಇಂಜಿನ್ ಸರಕಾರದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಸುಮಾರು 2 ಸಾವಿರ ಕೋಟಿ ರೂ ಗಳ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ನಾವೂರ ಗ್ರಾಮದಲ್ಲಿ 3.33 ಕೋಟಿ ಅನುದಾನದ ಮೂಲಕ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ಮತ್ತು ಮಾರ್ಚ್ 12 ರಂದು ಬಂಟ್ವಾಳದಲ್ಲಿ ನಡೆಯುವ ವಿಜಯಸಂಕಲ್ಪ ಯಾತ್ರೆಯ ಬಗ್ಗೆ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಗ್ರಾಮದ ಕಟ್ಟಕಡೆಯ ಪ್ರತಿಯೊಬ್ಬರೂ ಅಭಿವೃದ್ಧಿಯಾದಾಗ ಮಾತ್ರ ದೇಶ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಜಾತ್ಯಾತೀತವಾಗಿ ಸರ್ವರ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಆಡಳಿತದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಆರೋಗ್ಯ, ಶೈಕ್ಷಣಿಕ , ಧಾರ್ಮಿಕ ಸಹಿತ ಎಲ್ಲಾ ಕ್ಷೇತ್ರದಲ್ಲಿ ನನಗೆ ಅವಕಾಶ ನೀಡಿದ ಮತದಾರರಿಗೆ ಅನ್ಯಾಯವಾಗದಂತೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸಾಧಿಸಿದ ಬಳಿಕ ಐದು ವರ್ಷಗಳಲ್ಲಿ ಅಭಿವೃದ್ಧಿ ಜೊತೆಗೆ ಯಾವುದೇ ಗಲಾಟೆ ಗೊಂದಲಗಳಿಲ್ಲದೆ, ಕ್ಷೇತ್ರದಲ್ಲಿ ಶಾಂತಿ ನೆಲೆಸುವ ಕೆಲಸಕ್ಕೆ ಹೆಚ್ಚಿನ ಒತ್ತುನೀಡಿದ್ದೇನೆ , ಇದಕ್ಕೆ ದೇವರ ಆಶ್ರೀರ್ವಾದ ಕ್ಷೇತ್ರದ ಜನತೆಯ ಸಹಕಾರ ಬಹಳಷ್ಡು ಸಿಕ್ಕಿದೆ ಎಂದು ಅವರು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕನಪಾದೆ ಯುವಕರ ಬೇಡಿಕೆಯಂತೆ ಮುಂದಿನದಿನಗಳಲ್ಲಿ ಕನಪಾದೆಯಲ್ಲಿ ಹೈಟೆಕ್ ಕಬ್ಬಡ್ಡಿ ಕೋರ್ಟುನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು. ಅಪಪ್ರಚಾರಕ್ಕೆ ಕಿವಿಗೊಡಬೇಡಿ,ಬಲಿಷ್ಠ ನಾಯಕತ್ವದ ಅಡಿಯಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದೆ. ಪಕ್ಷ ಬಲಿಷವಾದಾಗ ಪ್ರತಿಯೊಬ್ಬ ಕಾರ್ಯಕರ್ತನೂ ಬಲಿಷ್ಟವಾಗುತ್ತಾನೆ. ಹಾಗಾಗಿ ಯಾವುದೇ ಗೊಂದಲಗಳಿದ್ದರೂ ಎಲ್ಲವನ್ನು ಬದಿಗಿಟ್ಟು ಪಕ್ಷದ ಬಲವರ್ಧನೆಗಾಗಿ ಜತೆಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಬೂಡ ಅಧ್ಯಕ್ಷ ದೇವದಾಸ್ ಬಂಟ್ವಾಳ ಮಾತನಾಡಿ,ಕಳೆದು ಐದು ವರ್ಷಗಳಲ್ಲಿ ಅಭಿವೃದ್ಧಿ ಜೊತೆಗೆ ಶಾಂತಿಯುತ ಬಂಟ್ವಾಳ ನಿರ್ಮಾಣವನ್ನು ಶಾಸಕ ರಾಜೇಶ್ ನಾಯ್ಕ್ ಮಾಡಿದ್ದಾರೆ ಎಂದು ಎದೆ ತಟ್ಟಿ ಹೇಳುಬಹುದು ಎಂದು ಅವರು ಹೇಳಿದರು. ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಅಧಿಕಾರಿಗಳಿಗೆ ಮುಕ್ತವಾದ ಅವಕಾಶವನ್ನು ಶಾಸಕರು ನೀಡಿದ ಪರಿಣಾಮವಾಗಿ ಇಂದು ಶಾಂತಿಯ ಬಂಟ್ವಾಳ ನಿರ್ಮಾಣವಾಗಿದೆ.
ನಾವೂರ 6 ಕೋಟಿ ಗಿಂತಲೂ ಹೆಚ್ಚಿನ ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು. ದಿನಕ್ಕೊಂದರಂತೆ ರಸ್ತೆ ಅಭಿವೃದ್ಧಿ ಕಾರ್ಯಗಳು ಶಾಸಕ ರಾಜೇಶ್ ನಾಯ್ಕ್ ಅವರ ಶಾಸಕತ್ವದ ಅವಧಿಯಲ್ಲಿ ಮಾಡಲಾಗಿದೆ. ಅಭಿವೃದ್ಧಿ ಮಾಡಿದ್ದೇನೆ ಎಂದು ಸುಳ್ಳು ಹೇಳಿ ಪ್ರಚಾರ ಮಾಡಿಕೊಂಡರೆ ಜನ ನಂಬುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ನಾವೂರ ಗ್ರಾ.ಪಂ. ಸದಸ್ಯ ರಾದ ವಿಜಯಕುಮಾರ್, ಜನಾರ್ದನ ಕೊಂಬೆಟ್ಟು, ಇಂದಿರಾ, ನಾರಾಯಣ ಪ್ರಮುಖರಾದ ಶೀಲಾ, ಸದಾನಂದ ನಾವೂರ ಸ್ವಾಗತಿಸಿ ವಂದಿಸಿದರು.