ಮಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ಮತ್ತು ಬಂದ್‌ಗೆ ಕೆಪಿಸಿಸಿ ಕರೆ ನೀಡಿದ್ದು, ಅದರಂತೆ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾ.೯ರಂದು ಮಂಗಳೂರಿನ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೯ರಿಂದ ೧೧ರವರೆಗೆ ಪ್ರತಿಭಟನೆ ನಡೆಸಲಾಗುವುದು. ಆದರೆ ಎಸ್ಸೆೆಸ್ಸೆೆಲ್ಸಿ, ಪಿಯುಸಿ ಪರೀಕ್ಷೆಗಳು ಇರುವುದರಿಂದ ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ತೊಂದರೆ ಆಗದಂತೆ ಬಲವಂತದ ಬಂದ್ ಆಗಲೀ, ಬಸ್ಸು ಬಂದ್ ಮಾಡುತ್ತಿಲ್ಲ. ಸ್ವಯಂ ಪ್ರೇರಿತ ಬಂದ್‌ಗಷ್ಟೇ ಕರೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆೆ ಸಿಎಂ ಬೊಮ್ಮಾಯಿ ಪುರಾವೆ ಕೇಳುತ್ತಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಸ್ವತಃ ಎಡಿಜಿಪಿ ಜೈಲಲ್ಲಿದ್ದಾರೆ. ಅಧ್ಯಾಪಕರ ನೇಮಕಾತಿ, ಮೆಸ್ಕಾಂ ಅಧಿಕಾರಿಗಳ ನೇಮಕ, ಕುಲಪತಿ ನೇಮಕಕ್ಕೂ ಲಂಚದ ವಿಚಾರ ಬೆಳಕಿಗೆ ಬಂದಿದೆ. ಸಚಿವ ಈಶ್ವರಪ್ಪ ಹೆಸರು ಬರೆದು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿದ ಪುರಾವೆ ಸಾಲದಾ? ಸಿಎಂ ಸ್ಥಾನಕ್ಕೆ ಎರಡೂವರೆ ಸಾವಿರ ಕೋಟಿ ರೂ. ನೀಡಬೇಕು ಎಂದ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಯ ಪುರಾವೆ ಇಲ್ವಾ? ಸಿಎಂ ಮತ್ತೆ ಮತ್ತೆ ಪುರಾವೆ ಕೇಳೋದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು. ಈ ಎಲ್ಲ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು.
‘ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ನೀಡುವಾಗ ಆಧಾರ್ ನಂಬರ್ ಕೇಳುತ್ತಿದ್ದಾರೆ. ಅದರಿಂದ ವೈಯಕ್ತಿಕ ಮಾಹಿತಿ ಬಹಿರಂಗ ಆಗುವ ಸಾಧ್ಯತೆಯಿದೆ’ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ. ಆದರೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡಲ್ಲಿ ಆಧಾರ್ ಕಾರ್ಡ್ ಕೇಳುತ್ತಿಲ್ಲ. ಈಗ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಕೊಡಬೇಕಾಗುವ ಸಂದರ್ಭ ಅದರಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗಲ್ವಾ? ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳಿಂದ ಬಿಜೆಪಿಯವರು ವಿಚಲಿತರಾಗಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹರೀಶ್ ಕುಮಾರ್ ಹೇಳಿದರು.
ಮಂಗಳೂರು ಸ್ಮಾರ್ಟ್ ಸಿಟಿಗೆ ೮೦೦ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಅಂದರೆ ೮ ವಾರ್ಡ್‌ಗಳ ಪೈಕಿ ಪ್ರತಿ ವಾರ್ಡ್‌ಗೆ ೧೦೦ ಕೋಟಿ ರೂ. ಖರ್ಚಾದಂತಾಗಿದೆ. ಎಲ್ಲಿ, ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂಬ ಪಟ್ಟಿ ಕೊಡಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಭರತ್ ಮುಂಡೋಡಿ, ಶುಭೋದಯ ಆಳ್ವ, ನಝೀರ್ ಬಜಾಲ್ ಇದ್ದರು.