ಬಂಟ್ವಾಳ: ಶಾಂತಿ ಸಾಮರಸ್ಯದ ಬಂಟ್ವಾಳ ನಿರ್ಮಾಣ ನನ್ನ ಮೊದಲ ಆದ್ಯತೆ ಯಾಗಿದ್ದು, ಕಾವಳಮೂಡೂರಿನಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿದ್ದು, ಕಾರ್ಯಕರ್ತರ ನೇತೃತ್ವದಲ್ಲಿ ಸಮಗ್ರವಾಗಿ ಇನ್ನಷ್ಟು ಸಹಕಾರ ನೀಡುವುದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಕಾವಳಮೂಡೂರು ಗ್ರಾಮದಲ್ಲಿ ರೂ.8.40 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾರ್ಯಕರ್ತರ ಮೇಲೆ ನಡೆಯುವ ದಬ್ಬಾಳಿಕೆ, ಸುಳ್ಳು ಕೇಸು ದಾಖಲು, ದೊಂಬಿಯ ರಾಜಕಾರಣವನ್ನು ಕೊನೆಗಾಣಿಸಬೇಕು ಎಂಬ ಕನಸು, ಆಸೆಗೆ ಕ್ಷೇತ್ರದ ಜನರು ಸಹಕಾರ ನೀಡಿದರು, ಹಾಗಾಗಿ ಕಳೆದ ಐದು ವರ್ಷಗಳಿಂದ ಶಾಂತಿಯ ನವ ಬಂಟ್ವಾಳ ನಿರ್ಮಾಣವಾಯಿತು ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಮತ ನೀಡಿ ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸ ಮಾಡಿದ ಆತ್ಮತೃಪ್ತಿ ಇದೆ ಎಂದು ಅವರು ತಿಳಿಸಿದರು. ಜಗತ್ತು ಮೆಚ್ಚಿದ ನಾಯಕನ ಜೊತೆಗೆ ನಾವು ಇದ್ದೇವೆ ಎಂಬುದೇ ಖುಷಿಯ ವಿಚಾರ.
ವೈಯಕ್ತಿಕ ವಿಚಾರದಲ್ಲಿ ನಾನು ಈವರೆಗೆ ರಾಜಕೀಯ ಮಾಡಿಲ್ಲ.ಪಕ್ಷದ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿದ್ದೇನೆ. ಆದರೆ ಕಳೆದ ಐದು ವರ್ಷಗಳಲ್ಲಿ ಜನತೆ ನೀಡಿದ ಪ್ರೀತಿಗೆ ನಾನು ಚಿರ ಋಣಿಯಾಗಿದ್ದೇನೆ.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ನಿಮ್ಮ ಪ್ರತಿ ಮತ ಗ್ರಾಮದ ಅಭಿವೃದ್ಧಿಗೆ ಕಾರಣವಾಗಿದೆ.
ಬ್ರೋಕರ್ ಗಳಿಲ್ಲದೆ, ಸರ್ಕಾರದ ಪ್ರತಿ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ದೊರಕಿದ ಇತಿಹಾಸ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯವಾಯಿತು.
ದೇಶ ಕಟ್ಟಲು ಬಿಜೆಪಿ ಕೆಲಸ ಮಾಡಿದರೆ, ಕಾಂಗ್ರೆಸ್ ಕುಟುಂಬ ಕಟ್ಟಲು ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು.
ಕಾವಳಮೂಡೂರು ಸೊಸೈಟಿಯಲ್ಲಿ ಬಡವರ ಕೋಟ್ಯಾಂತರ ರೂಪಾಯಿಗಳನ್ನು ಗುಳುಂ ಮಾಡಿದ್ದು ಯಾರು ? ಎಂದು ಪ್ರಶ್ನಿಸಿದರು. ಇದು ಕಾಂಗ್ರೆಸ್ ಗ್ಯಾರಂಟಿಯಾ ? ಎಂದು ಕೇಳಿದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ, ಕಾವಳಮೂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕೋಟ್ಯಾಂತರ ರೂ ಅನುದಾನಗಳ ಮೂಲಕ ನಡೆದ ವಿವಿಧ ಅಭಿವೃದ್ದಿಯನ್ನು ನೋಡಿದಾಗ ಬಂಟ್ವಾಳದಲ್ಲಿ ಪರಿವರ್ತನೆ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
23 ರಸ್ತೆಗಳು ಕಾವಳಮೂಡೂರಿನಲ್ಲಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು. ರೂ.2 ಕೋಟಿ ವೆಚ್ಚದಲ್ಲಿ ಕಾರಿಂಜ ದೇವಸ್ಥಾನದ ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಗ್ರಾಮದ ಜನರ ಹಾಗೂ ಹಿಂದೂ ಸಂಘಟನೆಯವರ ಒತ್ತಾಯದ ಮೇರೆಗೆ ಶಾಸಕ ರಾಜೇಶ್ ನಾಯ್ಕ್ ಅವರು ಸರಕಾರಕ್ಕೆ ನೀಡಿದ ಮನವಿಯಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಕ್ಕೆ ರಾಜ್ಯ ಸರಕಾರ ಕಾನೂನಾತ್ಮಕ ಅದೇಶ ಮಾಡಿದೆ. ಇದರ ಜೊತೆಗೆ ಇತರ ಮೂಲಭೂತವಾದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದು ಅವರು ತಿಳಿಸಿದರು.
ಗ್ರಾಮಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ದೇವಾಡಿಗ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಅಜಿತ್ ಶೆಟ್ಟಿ, ಸದಸ್ಯರಾದ ಶೇಷ ಗಿರಿ ಕೋಡಿಮಾನ್ಯ, ಪ್ರಶಾಂತ್ ಶೆಟ್ಟಿ ಪೆರುವಾರ್, ವೀಣಾ ನಾಯ್ಕ್, ಗಣೇಶ್ ದೇವಾಡಿಗ, ರಾಜ್ ಗೋಪಾಲ್ ನಾಯಕ್, ರೇವತಿ ಮಡಿವಾಳ ಕರಂಬಾರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಕಾರ್ಯದರ್ಶಿ ರಮನಾಥ ರಾಯಿ, ಶ್ರೀ ಕ್ಷೇತ್ರ ಕಾರಿಂಜದ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಪ್ರಮುಖರಾದ ಗಣೇಶ್ ಭಟ್ , ಗಣಪತಿ ಭಟ್ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ಮೋಹನ್ ಆಚಾರ್, ದಿನೇಶ್ ಶೆಟ್ಟಿ ದಂಬೆದಾರ್, ರಾಜಾರಾಂ ನಾಯ್ಕ್ , ಶರ್ಮಿತ್ ಜೈನ್, ಶುಭಕರ ಶೆಟ್ಟಿ, ಶಂಕರ್ ಶೆಟ್ಟಿ , ಸೀತಾರಾಮ್ ಶೆಟ್ಟಿ, ಖಾದರ್ ಸಾಹೇಬ್ ಇಚ್ಚಿಲ, ಲೋಕಯ್ಯ ಮಾಸ್ಟರ್, ಗಿರಿಯಪ್ಪ ಪೂಜಾರಿ ಕೊಂಬೆಲು,ರವಿ ಐತಾಳ್, ಹರೀಶ್ ಪ್ರಭು, ಲೋಹಿತ್ ಕುಮಾರ್, ರಂಜಿತ್ ಮೈರ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಆರ್ಥಿಕ ವಾಗಿ ಸಂಕಷ್ಟದಲ್ಲಿರುವ ಕಮಲ ಕಲ್ಲಂಜ ಅವರಿಗೆ ಧನ ಸಹಾಯ ಮಾಡಲಾಯಿತು. ದಿನೇಶ್ ಶೆಟ್ಟಿ ಸ್ವಾಗತಿಸಿದರು. ದೇವದಾಸ್ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.