ಉಜಿರೆ: ಶಿಷ್ಠರ ರಕ್ಷಣೆ ಹಾಗೂ ದುಷ್ಟರ ಶಿಕ್ಷೆ ಪೋಲೀಸರ ನಿಷ್ಠೆಯ ಕರ್ತವ್ಯವೂ, ಪವಿತ್ರ ಸೇವೆಯೂ ಆಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಧರ್ಮಸ್ಥಳದಲ್ಲಿ ಮೂರು ಕೋಟಿ ರೂ. ಅನುದಾನದಲ್ಲಿ ನಿರ್ಮಿಸಲಾದ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಸಿ ಮಾತನಾಡಿದರು.
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ದರ್ಮಸ್ಥಳವು ಸತ್ಯ, ಧರ್ಮ, ನ್ಯಾಯ ಮತ್ತು ನೀತಿ ನೆಲೆನಿಂತ ಪವಿತ್ರ ಪುಣ್ಯ ಕ್ಷೇತ್ರ ಎಂಬ ಪ್ರತೀತಿ ಇದೆ. ಮಾತು ಬಿಡ ಮಂಜುನಾಥ ಎಂಬ ಮಾತು ಎಲ್ಲಿರಿಗೂ ಚಿರಪರಿಚಿತ. ಪವಿತ್ರ ತೀರ್ಥಕ್ಷೇತ್ರಗಳಲ್ಲಿ ದೇವರು ಮತ್ತು ದೈವಗಳೇ ಧರ್ಮ ಸಂರಕ್ಷಕರು. ಆದರೂ ಕೆಲವು ಮನುಷ್ಯರು ಮಾನಸಿಕವಾಗಿ ಸ್ವಾರ್ಥ, ಆಸೆ-ದುರಾಸೆ ಮತ್ತು ಲಾಲಸೆಯಿಂದ ಅಧರ್ಮ, ಅನ್ಯಾಯಕ್ಕೆ ಪ್ರೇರಿತರಾಗಿ ಪುಣ್ಯ ಕ್ಷೇತ್ರಗಳಲ್ಲಿಯೂ ಕಳ್ಳತನದಂತಹ ಅಪರಾಧಗಳನ್ನು ಮಾಡುತ್ತಾರೆ. ಆದರೆ ಧರ್ಮಸ್ಥಳದಲ್ಲಿ ನೇತ್ರಾವತಿ ನದಿಯಿಂದ ಕಲ್ಲನ್ನು ಕೊಂಡುಹೋದವರು ಕೂಡಾ ಮತ್ತೆ ತೊಂದರೆಯಾಗಿ ಅದನ್ನು ಮರಳಿಸಿದ್ದಾರೆ. ಶ್ರೀ ಮಂಜುನಾಥ ಸ್ವಾಮಿಯ ಮೇಲಿನ ಭಕ್ತಿ ಮತ್ತು ಅಣ್ಣಪ್ಪ ಸ್ವಾಮಿಯ ಭಯದಿಂದ ಇಲ್ಲಿ ಸಾಮಾನ್ಯವಾಗಿ ದುಷ್ಕೃತ್ಯಗಳು ನಡೆಯುವುದಿಲ್ಲ. ಆದರೂ, ಪೊಲೀಸರ ಭಯ ಮತ್ತು ಎಚ್ಚರಿಕೆಯಿಂದ ಸಮಾಜದ ಶುದ್ಧೀಕರಣವಾಗಿ ಅರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಪೊಲೀಸರು ಮಾಡುವ ಸೇವೆಗೆ ಸದಾ ದೇವರ ಕೃಪೆ ಮತ್ತು ಅನುಗ್ರಹ ಇರುತ್ತದೆ. ಪೊಲೀಸರು ಶ್ರಮಜೀವಿಗಳಾಗಿದ್ದು ಅವರಿಗೆ ಸಮಸ್ಯೆ, ಸವಾಲುಗಳು ಎದುರಾಗಾದ ಸರ್ಕಾರ ಕಾಯ ಕಲ್ಪ ನೀಡಿ ಅವರಿಗೆ ರಕ್ಷಣೆ ಕೊಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಆಕರ್ಷಕ ಹಾಗೂ ಸುಂದರ ವಿನ್ಯಾಸದ ಪೊಲೀಸ್ ಠಾಣೆ ಕಟ್ಟಡವನ್ನು ರೂಪಿಸಿದ ಶಾಸಕ ಹರೀಶ್ ಪೂಂಜ ಮತ್ತು ಎಂಜಿನಿಯರ್ ಅವರನ್ನು ಹೆಗ್ಗಡೆಯವರು ಅಭಿನಂದಿಸಿದರು.
ಕಿಯೋನಿಕ್ಷ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮತ್ತು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು.
ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಧರ್ಮಸ್ಥಳ ಗ್ರಾಮಪಂಚಾಯಿತಿ ಅಧ್ಯಕ್ಷೆ ಜಯಾಮೋನಪ್ಪ ಗೌಡ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಧಕ್ಷಿಣ ಕನ್ನಡ ಜಿಲ್ಳಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸ್ವಾಗತಿಸಿದರು. ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಅಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ಧನ್ಯವಾದವಿತ್ತರು. ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.