ಮಂಗಳೂರು: ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಮತ್ತು ಸೃಷ್ಟಿ ಸಂಸ್ಥೆ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ಮಟ್ಟದ ಕರ್ನಾಟಕ ವೈಭವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನ ಡಾ.ಎಪಿಜೆ ಅಬ್ದುಲ್ ಕಲಾಂ ಸದ್ಬಾವನಾ ಪ್ರಶಸ್ತಿಗೆ ಚಿಕ್ಕಮಗಳೂರಿನ ಸಮಾಜಸೇವಕ ನಸೀರ್ ಅಹಮ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 9ರಂದು ಬೆಂಗಳೂರಿನ ಚಾಮರಾಜ ಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡುವರು. ಸಮಾಜಸೇವೆ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಸೀರ್ ಅಹಮ್ಮದ್ ಪರಿಚಯ:
ಮೂಲತಃ ಚಿಕ್ಕಮಗಳೂರಿನವರಾದ ನಸೀರ್ ಅಹಮ್ಮದ್ ಬಿಸಿನೆಸ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಘೋಷಣೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಸೀರ್ ನ್ಯೂಸ್ ಕನ್ನಡದ ಜೊತೆ ಮಾತನಾಡಿದ್ದು, ನಾನು ಯಾವುದೇ ಪ್ರಶಸ್ತಿಗೆ ಬಯಸಿ ಈ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿಲ್ಲ ಸಮಾಜದ ಒಳಿತಿಗಾಗಿ ಮತ್ತು ಚಿಕ್ಕಮಗಳೂರಿನ ಜನರು ಹಸಿವು ಮುಕ್ತವಾಗಿ ಬದುಕಬೇಕು ಎಂಬ ಮಹದಾಸೆಯೊಂದಿಗೆ ಈ ಕಾರ್ಯಗಳನ್ನು ಮಾಡುತ್ತಿದ್ದೇನೆ. ಈ ಸಮಾಜಮುಖಿ ಕಾರ್ಯವನ್ನು ಪರಿಗಣಿಸಿದ್ದಕ್ಕಾಗಿ ನಾನು ಸಮಾಜ, ಸಂಘಟನೆಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.