ಉಜಿರೆ: “ಶಿಸ್ತು, ಸಂಯಮ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆಗಳಿಂದ ಕೆಲಸ ಮಾಡುವ ನೌಕರರು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಇಂತಹ ವ್ಯಕ್ತಿಗಳಿಂದ ಸಂಸ್ಥೆಯ ಗೌರವ ಹೆಚ್ಚುತ್ತದೆ. ಶಿಕ್ಷಣ ಎಂಬುದು ಪ್ರತಿಯೊಬ್ಬನಿಗೂ ಪ್ರಾಮುಖ್ಯವಾಗಿದ್ದು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆದರೆ ಗುರಿಯನ್ನು ತಲುಪಲು ಸಾಧ್ಯ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಧ.ಮಂ.ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶುಕ್ರವಾರ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಶ್ರೀ ಧ.ಮಂ.ಎಜುಕೇಶನಲ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ,ನಿವೃತ್ತರಾದ ಸಿಬ್ಬಂದಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. “ಪರಿವರ್ತನೆಯ ಹಠದೊಂದಿಗೆ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಕರ ಮಾರ್ಗದರ್ಶನದಿಂದ ಸಮಾಜದಲ್ಲಿ ಬೆಳಕು ಮೂಡುತ್ತದೆ.ಶಿಕ್ಷಕರು ತಪ್ಪು ಮಾಡಿದರೆ ಸಮಾಜಕ್ಕೆ ಹಾನಿ ಉಂಟಾಗುತ್ತದೆ. ಶಿಕ್ಷಕರು ಸಲ್ಲಿಸುವ ಉತ್ತಮ ಸೇವೆ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಧ್ಯಾಪಕರಲ್ಲಿ ಶಿಲ್ಪಿಯ ತಾಳ್ಮೆ ಇರಬೇಕು ಮಕ್ಕಳ ಆತ್ಮಾಭಿಮಾನಕ್ಕೆ ಪೆಟ್ಟು ಬೀಳದಂತೆ ಎಚ್ಚರವಹಿಸಿ ಅವರನ್ನು ತಿದ್ದಿ ತೀಡಬೇಕು”ಎಂದು ಹೇಳಿದರು.
ಇಸ್ಕಾನ್ ನ ಶ್ರೀಭಕ್ತಿ ವಿಕಾಸ್ ಸ್ವಾಮಿ ಮಹಾರಾಜ್ ಮಾತನಾಡಿ “ಮಾನವ ಜನ್ಮವನ್ನು ಧರ್ಮದ ಶ್ರೇಯಸ್ಸಿಗೆ ಉಪಯೋಗಿಸಬೇಕು.ಮಾನವ ಜೀವನವು ಪ್ರಕೃತಿ ಅವಲಂಬಿತವಾಗಿದೆ,ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬನ ಕರ್ತವ್ಯ. ಜೀವನವನ್ನು ಸ್ವಂತ ಸುಖದ ಬಗ್ಗೆ ಮಾತ್ರ ಯೋಚಿಸದೆ ಸಮಾಜವನ್ನು ಬೆಳೆಸುವ ಧ್ಯೇಯದೊಂದಿಗೆ ನಡೆಸಬೇಕು” ಎಂದು ಹೇಳಿದರು.
ಧ.ಮಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಇಸ್ಕಾನ್ ನ ಸ್ವಾಮೀಜಿ ಶ್ರೀರಾಮ ಚರಣಾರವಿಂದ ದಾಸ, ಎಸ್ ಡಿ ಎಂ ಐ ಟಿ ತಾಂತ್ರಿಕ ವಿಭಾಗದ ಸಿಇಒ ಪೂರನ್ ವರ್ಮ, ಉಪಸ್ಥಿತರಿದ್ದರು. ಹೇಮಾವತಿ ವೀ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು.
ಎಸ್ ಡಿ ಎಂ ಇ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುಮಾ ಶ್ರೀನಾಥ್ ಪ್ರಾರ್ಥಿಸಿದರು.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಸನ್ಮಾನಿತರ ವಿವರ ನೀಡಿದರು. ಶಿಕ್ಷಕ ರಾಮಕೃಷ್ಣ ಭಟ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.ಎಸ್ ಡಿ ಎಂ ಸಿ ಬಿ ಎಸ್ ಇ ಶಾಲೆಯ ಪ್ರಿನ್ಸಿಪಾಲ್ ಮನಮೋಹನ್ ನಾಯಕ್ ವಂದಿಸಿದ ರು.
33ಮಂದಿಗೆ ಸನ್ಮಾನ
ನಿವೃತ್ತ ಆಂತರಿಕ ಲೆಕ್ಕ ಪರಿಶೋಧಕ ಸುಬ್ರಾಯ ವಿ.ಹೆಗ್ಡೆ, ಇ. ಎಸ್ಟೇಟ್ ಅಧಿಕಾರಿ ಯುವರಾಜ ಬಲ್ಲಾಳ್, ಶಾಲಾ ನಿವೃತ್ತ ಮುಖ್ಯಸ್ಥರಾದ ಶಶಿಕಲಾ ಡಿ,ಕೆ.ರಾಮಣ್ಣ ನಾಯ್ಕ,ಜಯ ಭಾರ ತಿ,ಹರ್ಷ ಕೆ.ಎನ್,ವಸಂತ ಭಟ್,ಸುಬ್ರಮಣ್ಯ ಭಟ್ ಬಿ,ಜನಾರ್ದನ ಬಿ.ತೋಳ್ಪಾಡಿತ್ತಾಯ,ಸದಾಶಿವ ಪೂಜಾರಿ ಸೂರ್ಯ ಪ್ರಕಾಶ್, ಧನ್ಯ ಕುಮಾರ್,ಯಶೋಧರ ಇಂದ್ರ, ವಿದ್ಯಾವತಿ, ಅಧ್ಯಾಪಕರಾದ ಬಿ.ಸಾವಿತ್ರಿ, ಕೃಷ್ಣಪ್ಪ ಗೌಡ ಎ., ಸುಬ್ರಮಣ್ಯ ಉಪಾಧ್ಯಾಯ, ವೀಣಾ ಸರಸ್ವತಿ, ಮೇರಿ ಪಿರೇರಾ, ರೇಣುಕಾ ಕೆ.ಎಸ್,ರಮಾದೇವಿ,ಶಾಲಿನಿ ಎಂ,ಶಿಕ್ಷಕೇತರ ವೃಂದದ ಜಿನರಾಜ ಪೂವಣಿ,ಧರ್ಮಪಾಲ,ವೀರೇಂದ್ರ ಕುಮಾರ್ ಜಿ,ಜಗತ್ಪಾಲ್, ಆದಪ್ಪ ಗೌಡ, ನೌಕರ ವೃಂದದ ಸುಶೀಲಾ,ಸೀತಮ್ಮ ಜಿನ್ನಪ್ಪ ಪೂಜಾರಿ,ಆನಂದ ಶೆಟ್ಟಿ,ಪದ್ದಣ್ಣ ಗೌಡ,ದೆಯ್ಯ,ಕುಸುಮಾ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಮಕಳಲ್ಲಿ ಶಿಕ್ಷಣದ ಬಗ್ಗೆ ಗೌರವ ಭಾವ ಮೂಡಿಸಿ- ಡಾ.ಹೇಮಾವತಿ ವೀ.ಹೆಗ್ಗಡೆ.
“ಪೋಷಕರು ತಮ್ಮ ಮಕ್ಕಳಲ್ಲಿ ಎಳವೆಯಿಂದಲೇ ಶಾಲೆ,ಶಿಕ್ಷಣದ ಬಗ್ಗೆ ಭಯದ ವಾತಾವರಣ ಸೃಷ್ಟಿಸದೆ,ಗೌರವ ಪೂರ್ವಕವಾದ ಭಾವನೆಗಳನ್ನು ತುಂಬಿದರೆ ಇದು ಮಕ್ಕಳನ್ನು ಮಾನಸಿಕವಾಗಿ ದೃಢಗೊಳಿಸಿ ಅವರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ.ಮಕ್ಕಳ ಭವಿಷ್ಯದ ಸುಭದ್ರತೆಗೆ ಅವರ ಚಿಂತನಾಲಹರಿಯಂತೆ ಪಾಠ,ಪ್ರವಚನಗಳು ನಡೆಯಬೇಕು. ಶಿಕ್ಷಕರ ಮತ್ತು ಮಕ್ಕಳ ಸಂಬಂಧ ಆತ್ಮೀಯವಾಗಿರಬೇಕು.ಉತ್ತಮ ಶಿಕ್ಷಕರಿರುವ ಶಾಲೆಗಳು ಜ್ಞಾನ ಯಜ್ಞವನ್ನು ಪೂರ್ಣಗೊಳಿಸುತ್ತವೆ. ವಿದ್ಯಾರ್ಥಿಗಳಲ್ಲಿರುವ ಕೀಳರಿಮೆಯನ್ನು ದೂರಿಕರಿಸಿ ಸಂಸ್ಕಾರಯುಕ್ತವಾದ ಶಿಕ್ಷಣ ನೀಡುವ ಶಿಕ್ಷಕರು ಸಮಾಜವನ್ನು ರೂಪಿಸುವ ವ್ಯಕ್ತಿಗಳ ಕೊಡುಗೆಗೆ ಕಾರಣರಾಗುತ್ತಾರೆ”ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಹೇಮಾವತಿ ವೀ ಹೆಗ್ಗಡೆ ಹೇಳಿದರು.