ಉಡುಪಿ: ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ನಗರದ ಬ್ರಹ್ಮಗಿರಿಯ ಫ್ಲ್ಯಾಟ್ ವೊಂದರಲ್ಲಿ ನಡೆದಿದೆ.
ಬ್ರಹ್ಮಗಿರಿಯ ಪ್ರವೀಣ್ ಶೆಟ್ಟಿ ಅವರ ಪುತ್ರಿ 11ವರ್ಷ ಪ್ರಾಯದ ಮಂಗಳದೇವಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಕುಂಜಾರುಗಿರಿಯ ಆನಂದ ತೀರ್ಥ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ.
ಸಂಕ್ರಾಂತಿ ಹಿನ್ನೆಲೆಯಲ್ಲಿ ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಬಾಲಕಿಯನ್ನು ಮನೆಯಲ್ಲೇ ಬಿಟ್ಟು ಹೆತ್ತವರು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದಾಗ ಎಷ್ಟೇ ಕೂಗಿ ಕರೆದರೂ ಬಾಲಕಿ ಬೆಡ್ ರೂಮ್ ನ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡು ಬಾಗಿಲು ಒಡೆದು ನೋಡಿದಾಗ ಆಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ತಿಳಿದುಬಂದಿದೆ.
ಬಾಲಕಿ ಮಂಗಳದೇವಿ, ಬೆಡ್ ರೂಮ್ ನಲ್ಲಿ ಯೂಟ್ಯೂಬ್ ವೀಕ್ಷಿಸಿದ ಬಳಿಕ, ಬಾತ್ ರೂಮ್ ನಲ್ಲಿ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.