ಬ್ರಹ್ಮಾವರ: ತಾಲೂಕಿನ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿ ರಾಜೇಶ ಪೂಜಾರಿ ಅವರ ಮನೆಯ ಬಾಗಿಲು ಒಡೆದು ಲಕ್ಷಾಂತರ ರೂಪಾಯಿಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಲ್ಲೂರು ಗ್ರಾಮದ ನಿವಾಸಿ 38ವರ್ಷದ ರಾಜೇಶ್ ದೇವಾಡಿಗ ಹಾಗೂ ಕಾರ್ಕಳ ಈದು ಗ್ರಾಮದ ನಿವಾಸಿ 39 ವರ್ಷದ ಮೊಹಮ್ಮದ್ ರಿಯಾಜ್ ಹೊಸ್ಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರು ಜ.22ರಂದು ದಾಖಲೆ ಇಲ್ಲದೆ ಕಾರಿನಲ್ಲಿ ಚಿನ್ನಾಭರಣ ಸಾಗಾಟ ಮಾಡುತ್ತಿದ್ದು, ಸಾಯಿಬ್ರಾಕಟ್ಟೆ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು.
ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಾಸ್ತಾನದ ಚರ್ಚ್ ಬಳಿ ಮನೆಗಳ್ಳತನ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಚಿನ್ನಾಭರಣ, ಕಾರು ಸಹಿತ 19ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು, ರಾತ್ರಿ ಮನೆ ಕಳ್ಳತನ ನಡೆಸಲು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ.