ಉಡುಪಿ: ಬಿಜೆಪಿಯ ಬಗ್ಗೆ ಕುಮಾರಸ್ವಾಮಿ ಚಿಂತಿಸುವ ಅಗತ್ಯವಿಲ್ಲ. ಜೆಡಿಎಸ್ ನಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುವುದನ್ನು ಅವರು ಮೊದಲು ನಿರ್ಧಾರ ಮಾಡಲಿ ಎಂದು ಉಡುಪಿ ಶಾಸಕ ರಘುಪತಿ ಭಟ್ ವಾಗ್ದಾಳಿ ನಡೆಸಿದ್ರು.
ಕುಮಾರಸ್ವಾಮಿಯ ಬ್ರಾಹ್ಮಣ ಮುಖ್ಯಮಂತ್ರಿ ಹೇಳಿಕೆಗೆ ಸಂಬಂಧಿಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಪ್ರತಿಯೊಂದನ್ನು ಜಾತಿಯಲ್ಲಿ ಅಳೆಯುವ ಚಾಳಿ. ಯಾವ ಜಾತಿಯ ಸಿಎಂ ಆಗಬೇಕೆಂಬುದನ್ನು ಆಪೇಕ್ಷೆ ಮಾಡುವುದು ತಪ್ಪು. ಬಿಜೆಪಿ ಜಾತಿಯ ಆಧಾರದಲ್ಲಿ ಯಾವತ್ತೂ ರಾಜಕಾರಣ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಸಿಎಂ ಆಯ್ಕೆಯಲ್ಲಿ ಜಾತಿ ಮುಖ್ಯವಲ್ಲ, ರಾಜ್ಯವನ್ನು ಮುನ್ನಡೆಸುವ ಒಳ್ಳೆಯ ವ್ಯಕ್ತಿ ಮುಖ್ಯ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರು ಆಗಬೇಕೆಂಬುವುದನ್ನು ಪಕ್ಷದ ನಾಯಕತ್ವ ತೀರ್ಮಾನ ಮಾಡುತ್ತದೆ. ಬಿಜೆಪಿಯಲ್ಲಿ ನಾಯಕತ್ವಕ್ಕೆ ಜಾತಿ ಕೌಂಟ್ ಆಗಲ್ಲ. ಜಾತಿಯ ಆಧಾರದಲ್ಲಿ ನಾಯಕತ್ವ ಅಳೆಯುವುದಿಲ್ಲ. ಕೆಲಸ, ಕ್ವಾಲಿಟಿಯ ಮೇಲೆ ನಾಯಕತ್ವ ನಿರ್ಧಾರ ಆಗುತ್ತದೆ ಎಂದರು.
ಕುಮಾರಸ್ವಾಮಿ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುತ್ತದೆ ಎಂದು ಒಪ್ಪಿಕೊಂಡಂತೆ ಆಯ್ತು. ಕುಮಾರಸ್ಬಾಮಿ ಸಲಹೆ ನಮಗೆ ಬೇಕಿಲ್ಲ, ಸಿಎಂ ಆಯ್ಕೆಯನ್ನು ನಮ್ಮ ಹೈಕಮಾಂಡ್ ಮಾಡ್ತದೆ. ರಾಜ್ಯದಲ್ಲಿ ನೂರಕ್ಕೆ ನೂರು ಬಿಜೆಪಿಯ ಪೂರ್ಣ ಬಹುಮತದ ಸರಕಾರ ಬರುತ್ತದೆ. ಆಗ ನಮ್ಮ ಹೈಕಮಾಂಡ್ ಯಾರು ಸಿಎಂ ಆಗಬೇಕೆಂಬುದನ್ನ ನಿಶ್ಚಿಯ ಮಾಡುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಒಳ್ಳೆಯ ಮುಖ್ಯಮಂತ್ರಿಯನ್ನು ರಾಜ್ಯಕ್ಕೆ ಕೊಡುತ್ತದೆ ಎಂದು ಹೇಳಿದರು.